ಕೊಂಕಣಿ ಸಿನಿಮಾ ‘ನಿರ್ಮಿಲ್ಲೆಂ ನಿರ್ಮೋಣೆಂ’ ಮಲಯಾಳಂಗೆ ಡಬ್ಬಿಂಗ್
ಮಂಗಳೂರು, ಸೆ.13: ಕೊಂಕಣಿ ಚಲನಚಿತ್ರ ‘ನಿರ್ಮಿಲ್ಲೆಂ ನಿರ್ಮೋಣೆಂ’ ಮಲೆಯಾಳಂಗೆ ಡಬ್ಬಿಂಗ್ ಆಗಲಿದೆ ಎಂದು ಚಿತ್ರದ ನಿರ್ದೇಶಕ ಮೆಲ್ವಿನ್ ಎಲ್ವಿಲ್ ತಿಳಿಸಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನಚಿತ್ರ ಈಗಾಗಲೇ ಕಂಡ ಪ್ರದೇಶಗಳಲ್ಲಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಅಕ್ಟೋಬರ್ 2ರಂದು ಕಾಸರಗೋಡಿನಲ್ಲಿ ಹಾಗೂ ಸುರತ್ಕಲ್ ನಲ್ಲಿ ತರೆಕಾಣಲಿದೆ. ಅಕ್ಟೋಬರ್ 15ರಂದು ಇಸ್ರೇಲ್, ನವೆಂಬರ್ 15ರಂದು ಕುವೈತ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
ಮಲಯಾಳಂನಲ್ಲಿ ಈಗಾಗಲೇ 57ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿರುವ ಎಂ. ಸಿನೆಮಾಸ್ ತಂಡ ಈ ಚಿತ್ರವನ್ನು ಡಬ್ಬಿಂಗ್ ಮಾಡಲು ಮುಂದೆ ಬಂದಿದೆ. ಇದರೊಂದಿಗೆ ಪ್ರಥಮ ಬಾರಿಗೆ ಕೊಂಕಣಿ ಚಲನಚಿತ್ರವೊಂದು ಮಲಯಾಳಂ ಭಾಷೆಗೆ ಡಬ್ಬಿಂಗ್ ಆಗುವ ದಾಖಲೆ ನಿರ್ಮಾಣವಾಗಲಿದೆ ಎಂದು ಮೆಲ್ವಿನ್ ಎಲ್ವೆಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಹೆನ್ರಿ ಡಿಸಿಲ್ವಾ, ಚಿತ್ರದ ವಿತರಕ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Next Story