ಉಡುಪಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ: ಕೋಡಿ ಬ್ಯಾರೀಸ್ ಪ.ಪೂ. ಕಾಲೇಜು ತಂಡ ಚಾಂಪಿಯನ್
ಕೋಟ, ಸೆ.13: ಉಡುಪಿ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೋಟ ವಿದ್ಯಾ ಸಂಘದ ಸಹಯೋಗದೊಂದಿಗೆ ಶುಕ್ರವಾರ ಕೋಟ ವಿವೇಕ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಾಲಿಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಕುಂದಾಪುರ ಕೋಡಿಯ ಬ್ಯಾರೀಸ್ ಪ.ಪೂ. ಕಾಲೇಜು ತಂಡ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಐದನೆ ಬಾರಿಗೆ ಜಿಲ್ಲಾ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಅಂತಿಮ ಪಂದ್ಯದಲ್ಲಿ ಕೋಟ ವಿವೇಕ ಕಾಲೇಜು ತಂಡವನ್ನು ಸೋಲಿಸುವ ಮೂಲಕ ಕೋಡಿ ಬ್ಯಾರೀಸ್ ತಂಡ ಜಯ ಸಾಧಿಸಿದೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಇಲ್ಯಾಸ್, ವೀಣಾ ಅಗರ್ ತಂಡದೊಂದಿಗೆ ಇದ್ದರು. ವಿಜೇತ ತಂಡಕ್ಕೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಉದ್ಘಾಟನೆ: ಪಂದ್ಯಾಟವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಶೆಟ್ಟಿ, ಯೋಧ ವಸಂತ ಬಂಗೇರ, ನಿವೃತ್ತ ಮುಖ್ಯ ಶಿಕ್ಷಕ ರಾಮದೇವ ಐತಾಳ್, ವೆಂಕಟೇಶ್ ಉಡುಪ, ಮುಖ್ಯ ಶಿಕ್ಷಕ ಶ್ರೀಪತಿ ಹೆರ್ಳೆ, ಜಗದೀಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಸಂತ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.