ಬಸ್ನಲ್ಲಿ ಮಹಿಳೆಯ ಪರ್ಸ್ ಕಳವು: ಎಟಿಎಂ ಬಳಸಿ ಸಾವಿರಾರು ರೂ. ಹಣ ಡ್ರಾ
ಶಿರ್ವ, ಸೆ.13: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಪರ್ಸ್ ಕಳವು ಮಾಡಿ, ಅದರಲ್ಲಿದ್ದ ಎಟಿಎಂ ಕಾರ್ಡನಿಂದ ಸಾವಿರಾರು ರೂ. ಹಣ ಡ್ರಾ ಮಾಡಿರುವ ಬಗ್ಗೆ ವರದಿಯಾಗಿದೆ.
ಬೆಳ್ಮಣ್ ಗ್ರಾಮದ ಪುನಾರು ನಿವಾಸಿ ಮನೋಹರ ನಾಯಕ್ ಎಂಬವರ ಪತ್ನಿ ಮಾಲತಿ ನಾಯಕ್(52) ಎಂಬವರು ಸೆ.11ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಶಿರ್ವ ಬಸ್ ನಿಲ್ದಾಣದಿಂದ ನವೀನ್ ಎಂಬ ಹೆಸರಿನ ಬಸ್ಸಿನಲ್ಲಿ ಉಡುಪಿಗೆ ಪ್ರಯಾಣ ಮಾಡುತ್ತಿದ್ದು, ಶಿರ್ವದಿಂದ ಬಂಟಕಲ್ ಮಧ್ಯೆ ಕಳ್ಳರು ಮಾಲತಿ ನಾಯಕ್ ಅವರ ಕೈಯಲ್ಲಿದ್ದ ಪರ್ಸ್ ಕಳವು ಮಾಡಿದ್ದರೆನ್ನಲಾಗಿದೆ.
ಈ ಪರ್ಸ್ನಲ್ಲಿ ಕೆನರಾ ಬ್ಯಾಂಕಿನ ಎಟಿಎಂ ಕಾರ್ಡ್, ಅದರಲ್ಲಿ ಪಿನ್ ನಂಬ್ರ ಇರುವ ಚೀಟಿ, ಆಧಾರ್ ಕಾರ್ಡ, ಪ್ರಧಾನಮಂತ್ರಿ ಆರೋಗ್ಯ ವಿಮೆ ಕಾರ್ಡ್, ಚುನಾವಣಾ ಗುರುತಿನ ಚೀಟಿ, 500ರೂ. ಹಾಗೂ ಚಿನ್ನದ ಉಂಗುರ ಇದ್ದು, ಕಳ್ಳರು ಪರ್ಸ್ನಲ್ಲಿದ್ದ ಎಟಿಎಂ ಕಾರ್ಡ್ನಿಂದ ಉಡುಪಿಯ ಎರಡು ಎಂಟಿಎಂ ಕೇಂದ್ರದಿಂದ ಒಟ್ಟು 34,000ರೂ. ಡ್ರಾ ಮಾಡಿರುವುದಾಗಿ ದೂರಲಾಗಿದೆ.
ಈ ಎಟಿಎಂಯಲ್ಲಿರುವ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪರ್ಸ್ ಕಳವು ಗೈದಿರುವುದು ಮಹಿಳೆ ಎಂಬುದು ಕಂಡುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.