ಮಂಗಳೂರು ಏರ್ಪೋರ್ಟ್ಗೆ ಅಕ್ರಮ ಪ್ರವೇಶ: ಆರೋಪಿ ಸೆರೆ
ಮಂಗಳೂರು, ಸೆ.15: ಬಜ್ಪೆಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ಗೆ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಯೋರ್ವನನ್ನು ವಾಯುಯಾನ ಭದ್ರತಾ ತಂಡ (ಎಎಸ್ ಜಿ)ದ ಸಿಬ್ಬಂದಿ ಶನಿವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ಕೇರಳದ ಕಾಸರಗೋಡು ನಿವಾಸಿ ಆರಿಫ್ ಕೊಟಿಕ್ಕ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 11:45ರ ಸುಮಾರು ಆರೋಪಿಯು ಟರ್ಮಿನಲ್ ಕಟ್ಟಡದಿಂದ ನಿರ್ಗಮನ ಗೇಟ್ ಮೂಲಕ ಹೊರಬರುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ.15ರಂದು ಬೆಳಗ್ಗೆ 12:54ಕ್ಕೆ ದುಬೈಗೆ ತೆರಳುತ್ತಿದ್ದ ಸ್ಪೈಸ್ಜೆಟ್ ಫ್ಲೈಟ್ ಎಸ್ಜಿ 59 ವಿಮಾನದ ಫ್ಯಾಬ್ರಿಕೇಟೆಡ್ ಇ-ಟಿಕೆಟ್ ತೋರಿಸಿ ಟರ್ಮಿನಲ್ನ್ನು ಪ್ರವೇಶಿಸಿದ್ದನು.
ಆತನ ಕುಟುಂಬದ ನಾಲ್ವರು ದುಬೈಗೆ ತೆರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೀಳ್ಕೊಡಲು ತಾನು ಟರ್ಮಿನಲ್ ಪ್ರವೇಶಿಸಿರುವ ವಿಷಯವನ್ನು ಅಧಿಕಾರಿಗಳ ಬಳಿ ಬಹಿರಂಗಪಡಿಸಿದ್ದಾನೆ. ಅವರನ್ನು ಬೀಳ್ಕೊಟ್ಟ ಬಳಿಕ ಟರ್ಮಿನಲ್ ಕಟ್ಟಡದ ನಿರ್ಗಮನ ಗೇಟ್ ಮೂಲಕ ವಾಪಸಾಗುತ್ತಿದ್ದಾಗ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು, ಆತನ ಪ್ರಯಾಣದ ದಾಖಲೆಗಳನ್ನು ತಪಾಸಣೆ ನಡೆಸಿದರು. ಟರ್ಮಿನಲ್ ಕಟ್ಟಡ ಪ್ರವೇಶಿಸಲು ಆರೋಪಿಯು ಟಿಕೆಟ್ನಲ್ಲಿ ತನ್ನ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡಿದ್ದನು ಎಂದು ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಆತನ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.