ಉಳ್ಳಾಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಸೆರೆ
ಮಂಗಳೂರು, ಮೇ 8: ಉಳ್ಳಾಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಳ್ಳಾಲ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದು, ಅವರಿಂದ 7.2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲಬೈಲು ಚೆನ್ನಯ್ಯಗುಡ್ಡೆಯ ಅನಿಲ್ ಕಂಪೌಂಡ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮುಹಮ್ಮದ್ ಇಕ್ಬಾಲ್(27) ಹಾಗೂ ತೌಡುಗೋಳಿ ಕ್ರಾಸ್ ನಿವಾಸಿ ಪ್ರಸ್ತುತ ಕೆದಂಬಾಡಿ ಕ್ವಾಟ್ರಸ್ನಲ್ಲಿ ಬಾಡಿಗೆ ಮನೆ ನಿವಾಸಿಯಾಗಿರುವ ಮುಹಮ್ಮದ್ ಅಝೀಝ್(34) ಬಂಧಿತ ಆರೋಪಿಗಳು.
ಉಳ್ಳಾಲಬೈಲು ಅನಿಲ್ ಕಾಂಪೌಂಡ್ ಮೈದಾನದಲ್ಲಿ ಓರ್ವ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯಾಧಾರದಲ್ಲಿ ಉಳ್ಳಾಲ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ಮುಹಮ್ಮದ್ ಇಕ್ಬಾಲ್ ಬಲೆಗೆ ಬಿದ್ದಿದ್ದಾನೆ. ಆತನಿಂದ ಸುಮಾರು 24 ಸಾವಿರ ರೂ. ವೌಲ್ಯದ 2.2 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಈತ ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಮುಹಮ್ಮದ್ ಅಝೀಝ್ ಸಿಕ್ಕಿಬಿದ್ದಿದ್ದು, ಆತನಿಂದ 60 ಸಾವಿರ ರೂ. ಬೆಲೆಬಾಳುವ ಸುಮಾರು 5 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.