ಪಡಿತರ ಚೀಟಿಗೆ ಇ-ಕೆವೈಸಿ ಅಪ್ಲೋಡ್ಗೆ ಅವಕಾಶ
ಉಡುಪಿ, ಡಿ.4: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ, ಎಪಿಎಲ್) ಕಾರ್ಡುದಾರರು ಹೊಸದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಅಪ್ಲೋಡ್ ಮಾಡಬೇಕಾಗಿದೆ. ಇದಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ತಂತ್ರಾಂಶದಲ್ಲಿ ಮಾಹಿತಿ ಅಪ್ಲೋಡ್ ಮಾಡುವಾಗ ಪಡಿತರ ಕಾರ್ಡಿನ ಕುಟುಂಬದ ಹಿರಿಯ ಮಹಿಳಾ ಸದಸ್ಯರನ್ನು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು ಮತ್ತು ಹೊಸ ಕುಟುಂಬದ ಮುಖ್ಯಸ್ಥ ರೊಂದಿಗೆ(ಹಿರಿಯ ಮಹಿಳಾ ಸದಸ್ಯೆ) ಇತರೆ ಸದಸ್ಯರ ಸಂಬಂಧದ ವಿವರಗಳನ್ನು ಹಾಗೂ ಪಡಿತರ ಚೀಟಿದಾರರ ಜಾತಿಯ ವಿವರವನ್ನು (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಇತರೆ) ಜಾತಿ ಪ್ರಮಾಣ ಪತ್ರದ ವಿವರಗಳನ್ನು ಸಹ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಜಾತಿಯವರಾಗಿದ್ದಲ್ಲಿ ಈ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ನ್ಯಾಯಬೆಲೆ ಅಂಗಡಿಗೆ ಬರಬೇಕಾಗುವುದು. ನ್ಯಾಯಬೆಲೆ ಅಂಗಡಿ ಮಾಲಕರು ಜಾತಿ ಪ್ರಮಾಣ ಪತ್ರದ ಸಂಖ್ಯೆ ನಮೂದಿಸಿ ತಮ್ಮ ಲಾಗಿನಲ್ಲಿಯೇ ಪರಿಶೀಲಿಸಿ, ಇತರೆ ವಿವರದೊಂದಿಗೆ ನಮೂದು ಮಾಡಬೇಕು. ಕಾರ್ಡುದಾರರು ಕಾರ್ಡಿನಲ್ಲಿ ಇರುವ ಎಲ್ಲಾ ಸದಸ್ಯರೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗೆ ತಪ್ಪದೇ ಕಡ್ಡಾಯವಾಗಿ ಹಾಜರಾಗಿ ತಮ್ಮ ಬಯೋ ದೃಢೀಕರಣ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡಬೇಕಾಗಿದೆ.
ವಯೋವೃದ್ಧರು, ಮರಣ ಹೊಂದಿರುವ, ಕುಷ್ಠರೋಗಿ, ಅಂಗವಿಕಲ (ಬೆರಳುಗಳಿಲ್ಲದ) ಎಂಡೋಸಲ್ಫಾನ್ ಬಾಧಿತರು ಹಾಗೂ ಕುಟುಂಬ ದೊಂದಿಗೆ ವಾಸವಿರದ ಸದಸ್ಯರ ಇ-ಕೆವೈಸಿ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಸದಸ್ಯರಿಗೆ ಮಾತ್ರ ಇ-ಕೆವೈಸಿ ವಿನಾಯಿತಿಯನ್ನು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿಯೇ ನೀಡಬಹುದಾಗಿದೆ.
ಕಾರ್ಡುದಾರರ ಇ-ಕೆವೈಸಿ ಅಪ್ಡೇಟ್ ಕಾರ್ಯವನ್ನು ಡಿಸೆಂಬರ್ ತಿಂಗಳಲ್ಲಿ ಡಿ.1ರಿಂದ 10ರವರೆಗೆ ಮತ್ತು ಜನವರಿ ತಿಂಗಳಲ್ಲಿ ಜ.1ರಿಂದ 10 ರವರೆಗೆ ಜಾರಿಗೊಳಿಸಲಾಗುತ್ತದೆ. ಈ ದಿನಗಳಲ್ಲಿ ಆನ್ಲೈನ್ ಮೂಲಕ ಪಡಿತರ ವಿತರಣಾ ಕಾರ್ಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.