ಕಡಬ: ನದಿಯಲ್ಲಿ ಮುಳುಗಿ ಯುವಕ ನಾಪತ್ತೆ
ಕಡಬ, ಡಿ.3: ಸ್ನೇಹಿತರೊಂದಿಗೆ ಕುಮಾರಧಾರ ನದಿಗೆ ಈಜಲು ತೆರಳಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯ್ಲ ಗ್ರಾಮದ ನೀಡೇಲು ಎಂಬಲ್ಲಿ ಗುರುವಾರ ನಡೆದಿದೆ.
ನಾಪತ್ತೆಯಾದ ಯುವಕನನ್ನು ಕೊಯ್ಲ ಗ್ರಾಮದ ಗುಲ್ಗೋಡಿ ನಿವಾಸಿ ರತ್ನಾಕರ ಕುಮಾರ್ ಯಾನೆ ಉದಯ ಪೂಜಾರಿ(32) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೀವ ಪೂಜಾರಿ ಮಾರಂಗ, ಹರೀಶ್ ಪಲ್ಲತ್ತಾರು, ಸತ್ಯಾ ರೈ ಸುಣ್ಣಾಡಿ, ಬೇಬಿ ಗೋಳಿತ್ತಡಿ ಎಂಬವರೊಂದಿಗೆ ನದಿಗೆ ಈಜಲು ತೆರಳಿದ್ದ ರತ್ನಾಕರ್ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದರೆನ್ನಲಾಗಿದೆ. ತಕ್ಷಣವೇ ಮೆಲಕ್ಕೆತ್ತಲಾಲು ಪ್ರಯತ್ನಿಸಿದರೂ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ರತ್ನಾಕರ ಕುಮಾರ್ ಅವರ ಪತ್ನಿ ಚೈತ್ರಾ ನೀಡಿರುವ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಶೋಧ ನಡೆಸುತ್ತಿದ್ದು, ರತ್ನಾಕರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
Next Story