ಉಪ್ಪಿನಂಗಡಿ: 30 ಅಡಿ ಆಳಕ್ಕೆ ಬಿದ್ದ ರಿಕ್ಷಾ; 4 ಮಂದಿಗೆ ಗಂಭೀರ ಗಾಯ
ಉಪ್ಪಿನಂಗಡಿ: ರಸ್ತೆಯಿಂದ ಸುಮಾರು 30 ಅಡಿ ಆಳದಲ್ಲಿರುವ ಗದ್ದೆಯೊಂದಕ್ಕೆ ಅಟೋ ರಿಕ್ಷಾವೊಂದು ಉರುಳಿ ಬಿದ್ದು ವೃದ್ಧರೋರ್ವರ ಸಹಿತ 4 ಮಂದಿ ಗಂಭೀರ ಗಾಯಗೊಂಡ ಘಟನೆ ಪುಳಿತ್ತಡಿಯಲ್ಲಿ ರವಿವಾರ ನಡೆದಿದೆ.
ರಿಕ್ಷಾದಲ್ಲಿದ್ದ ಬೆಳ್ತಂಗಡಿಯವರಾದ ಇಬ್ರಾಹೀಂ, ಅವರ ಪತ್ನಿ ಝರೀನಾ, ಅಳಿಯ ಮುಸ್ತಾಫ ಹಾಗೂ ರಿಕ್ಷಾ ಚಾಲಕ ಖಾಸಿಂ ಗಾಯಗೊಂಡಿದ್ದು, ಇವರಲ್ಲಿ ಇಬ್ರಾಹೀಂ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂದರ್ಭ ರಿಕ್ಷಾದಲ್ಲಿದ್ದ ಝರೀನಾ ಅವರ ಪುಟ್ಟ ಮಗು ಸಣ್ಣಪುಟ್ಟ ತರಚಿದ ಗಾಯಗಳಿಂದ ಅಪಾಯದಿಂದ ಪಾರಾಗಿದೆ.
ಬೆಳ್ತಂಗಡಿಯ ಇಬ್ರಾಹೀಂ ಅವರ ಕುಟುಂಬ ಉಪ್ಪಿನಂಗಡಿ ಕಡೆಗೆ ಬರುವಾಗ ಪುಳಿತ್ತಡಿ ತಿರುವಿನಲ್ಲಿ ಅಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಗದ್ದೆಗೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.