ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ ಬುಧವಾರ 7 ಮಂದಿಯ ವರದಿ ನೆಗೆಟಿವ್
ಮಂಗಳೂರು, ಎ.8: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ‘ಕೊರೋನ’ ಪ್ರಕರಣಗಳಲ್ಲಿ ಗೆಲುವು ಸಾಧಿಸತೊಡಗಿದೆ. ಅಂದರೆ ಬುಧವಾರ ಸ್ವೀಕರಿಸಿದ 7 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇನ್ನೂ 9 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
ಬುಧವಾರ 20 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 38,721 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಈ ಮಧ್ಯೆ ಬುಧವಾರ 9 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಂಗಳವಾರದವರೆಗೆ 3,930 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದರೆ, ಬುಧವಾರ ಅದರ ಸಂಖ್ಯೆಯು 3,625ಕ್ಕೆ ಇಳಿದಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಯಾರೂ ಕ್ವಾರಂಟೈನ್ನಲ್ಲಿಲ್ಲ. ಇಎಸ್ಐ ಆಸ್ಪತ್ರೆಯಲ್ಲಿ 11 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಬುಧವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 2,311 ಮಂದಿ ಪೂರೈಸಿದ್ದಾರೆ.
*ಈವರೆಗೆ 357 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 348 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 336 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್ಗಳ ಪೈಕಿ 4 ಮಂದಿ ಗುಣಮುಖರಾಗಿ ಸೋಮವಾರ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದರು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.