ಕೊರೋನ: ದ.ಕ. ಜಿಲ್ಲೆಯಲ್ಲಿ ಬುಧವಾರ 42 ಮಂದಿಯ ವರದಿ ನೆಗೆಟಿವ್
ಸತತ 11ನೆ ದಿನವೂ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ
ಮಂಗಳೂರು, ಎ.15: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಬುಧವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 42 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇದರೊಂದಿಗೆ ಕಳೆದ 11 ದಿನದಿಂದ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದ್ದು, ಇದು ದ.ಕ.ಜಿಲ್ಲೆಯ ಮಟ್ಟಿಗೆ ನೆಮ್ಮದಿಯ ವಿಚಾರವಾಗಿದೆ.
11 ದಿನದ ಹಿಂದೆ ಅಂದರೆ ಎ.4ರವರೆಗೆ 12ನೆ ಪಾಸಿಟಿವ್ ವರದಿ ಬಂದಿತ್ತು. ಆ ಬಳಿಕ ಬಂದ ವರದಿಗಳೆಲ್ಲವೂ ನೆಗೆಟಿವ್ ಆಗಿದೆ. ಅಂದಹಾಗೆ ಇನ್ನೂ 148 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಜ್ವರದ ಹಿನ್ನೆಲೆಯಲ್ಲಿ 15 ಮಂದಿಯ ಮೇಲೆ ನಿಗಾ ಇಡಲಾಗಿದೆ. ಬುಧವಾರ 74 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 39,032 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಬುಧವಾರ 22 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬುಧವಾರದವರೆಗೆ 1,225 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಯಾರೂ ಕ್ವಾರಂಟೈನ್ನಲ್ಲಿಲ್ಲ. ಇಎಸ್ಐ ಆಸ್ಪತ್ರೆಯಲ್ಲಿ 25 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಬುಧವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 4,848ಮಂದಿ ಪೂರೈಸಿದ್ದಾರೆ.
ಈವರೆಗೆ 658 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 510 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 498 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್ಗಳ ಪೈಕಿ ಮಗು ಮತ್ತು ವೃದ್ಧೆಯ ಸಹಿತ 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ 3 ಮಂದಿ ಚೇತರಿಸುತ್ತಿದ್ದಾರೆ.