ದ.ಕ.ಜಿಲ್ಲೆ : ಇಂದು ಒಟ್ಟು 24 ಮಂದಿಗೆ ಕೊರೋನ ಸೋಂಕು ದೃಢ
ಸೋಂಕಿತರ ಸಂಖ್ಯೆ 105ಕ್ಕೇರಿಕೆ
ಮಂಗಳೂರು, ಮೇ 28: ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಕೊರೋನ ಸೋಂಕಿನ 6 ಪ್ರಕರಣಗಳು ದೃಢಪಟ್ಟಿದ್ದರೆ, ಸಂಜೆ ಬಿಡುಗಡೆಯಾದ ಬುಲೆಟಿನ್ನಲ್ಲಿ ಮತ್ತೆ 18 ಮಂದಿಗೆ ಸೋಂಕು ದೃಢಗೊಂಡಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 105ಕ್ಕೇರಿದೆ.
ಆ ಪೈಕಿ ದ.ಕ.ಜಿಲ್ಲೆಯ 97 ಮತ್ತು ಉಳಿದ 8 ಪ್ರಕರಣವು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗೆ ಸೇರಿದೆ. ಸಂಜೆ ದೃಢಗೊಂಡ ಪ್ರಕರಣಗಳೆಲ್ಲವೂ ಮುಂಬೈಯಿಂದ ಮಂಗಳೂರಿಗೆ ಬಂದವರಲ್ಲಿ ಕಂಡು ಬಂದಿದೆ.
ದ.ಕ.ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಅಂದರೆ 24 ಪ್ರಕರಣಗಳು ಪತ್ತೆಯಾಗಿವೆ. ಮಾ.22ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಇದೀಗ 69 ದಿನಗಳ ಬಳಿಕ ಪಾಸಿಟಿವ್ ಪ್ರಕರಣ ಶತಕ ದಾಟಿವೆ.
ದ.ಕ.ಜಿಲ್ಲೆಯ ನಿವಾಸಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಮುಂಬೈಯಿಂದ ಜಿಲ್ಲೆಗೆ ಬಂದವರಲ್ಲೇ ಅಧಿಕ ಸಂಖ್ಯೆಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿರುವುದು ಜಿಲ್ಲೆಯ ಜನತೆಯನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
Next Story