ಮಂಗಳೂರು ಆರ್ಟಿಒ ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಕೆಲಸಗಳು ಪ್ರಾರಂಭ
ಮಂಗಳೂರು, ಮೇ 28: ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಯಲ್ಲಿ ಮಾ.22ರಿಂದ ಸ್ಥಗಿತಗೊಂಡಿದ್ದ ಲೈಸೆನ್ಸ್ಗೆ ಸಂಬಂಧಿಸಿದ ಕೆಲಸಗಳನ್ನು ಮೇ 29ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಆರ್ಟಿಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಲಿಕಾ ಲೈಸೆನ್ಸ್ (ಎಲ್ಎಲ್ ಪರೀಕ್ಷೆ), ಚಾಲನಾ ಅನುಜ್ಞಾ ಪತ್ರ ನೀಡುವಿಕೆ (ಡಿಎಲ್ ಪರೀಕ್ಷೆ), ಚಾಲನಾ ಅನುಜ್ಞಾ ಪತ್ರ ನವೀಕರಣ, ವಿಳಾಸ ಬದಲಾವಣೆ, ನಿರ್ವಾಹಕ ಲೈಸೆನ್ಸ್ ನೀಡುವಿಕೆ/ ನವೀಕರಣ, ಇಂಟರ್ನ್ಯಾಶನಲ್ ಡ್ರೈವಿಂಗ್ ಹಾಗೂ ಇತರ ಸೇವೆಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಜೂ.1ರಿಂದ ಪಡೆಯಬಹುದಾಗಿದೆ.
ಕೋವಿಡ್-19ರ ಜೊತೆ ಸೇರಿ ಬದುಕಬೇಕಾಗಿರುವುದರಿಂದ ಕೊರೋನ ಸೊಂಕಿತರಿಂದ ದೂರವಾಗಿರಲು ಸುರಕ್ಷಿತ ಅಂತರ ಹಾಗೂ ಜನದಟ್ಟಣೆ ಕಾಪಾಡಲು, ನಮ್ಮ-ನಿಮ್ಮ ಆರೋಗ್ಯ ಕಾಪಾಡಲು, ಪ್ರಾದೇಶಿಕ ಸಾರಿಗೆ ಕಚೇರಿಯ ಲೈಸೆನ್ಸ್ ವಿಭಾಗದ ಸೇವೆಗಳನ್ನು ಶೇ.50 ಕಡಿತ ಮಾಡಲಾಗಿದೆ. ಅಂದರೆ ಪ್ರತಿ ದಿನ 50 ಮಂದಿಯ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಸಾರ್ವಜನಿಕರು ಅರ್ಜಿಯೊಂದಿಗೆ ಮಾಸ್ಕ್ ಧರಿಸಬೇಕು. ಟ್ರರ್ಮಿನಲ್ ಸ್ಕ್ಯಾನಿಂಗ್ ಆದ ಮೇಲೆ ಕಚೇರಿ ಒಳಗಡೆ ಪ್ರವೇಶ ನೀಡಲಾಗುವುದು. ಅರ್ಜಿದಾರರ ಜೊತೆ ಬೇರೆ ಯಾರಿಗೂ ಪ್ರವೇಶವಿರುವುದಿಲ್ಲ. ಜೂ.30ರವರೆಗೆ ಚಾಲನಾ ಅನುಜ್ಞಾ ಪತ್ರ ಅವಧಿ ಚಾಲ್ತಿಯರುತ್ತದೆ. ಹೊಸ ಕಲಿಕಾ ಲೈಸೆನ್ಸ್ ಪರೀಕ್ಷೆಗಳ ಸ್ಲಾಟ್ನ್ನು ಜೂನ್ 15ರ ನಂತರ ನೀಡಲಾಗುವುದು. ಹಳೆ ಸ್ಲಾಟ್ ದಿನಾಂಕದ ಅಭ್ಯರ್ಥಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಕಚೇರಿ ಸಿಬ್ಬಂದಿಯ ಜೊತೆ ಸಹಕಾರ ನೀಡಬೇಕೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.