ಮೇ 31ರಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ ; ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ಉಡುಪಿ, ಮೇ 29: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೇ 31ರಿಂದ ಮೂರು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ಬಂದಿದೆ.
ಮೇ 29ರ ಶುಕ್ರವಾರ ಅಪರಾಹ್ನದ ವರದಿಯಂತೆ ಪ್ರಸ್ತುತ ಉಡುಪಿ ಜಿಲ್ಲೆ ಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಅಂದರೆ ಈ ಅವಧಿಯಲ್ಲಿ ಸುಮಾರು 6.5 ಸೆಂ.ಮೀನಿಂದ 11.5 ಸೆ.ಮೀವರೆಗೆ ಮಳೆಯಾಗುವ ಸಂಭವ ವಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಸಾರ್ವಜನಿಕರಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.
*ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ/ಮರಗಳ ಕೆಳಗೆ ನಿಲ್ಲದೆ, ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ತುರ್ತು ಸೇವೆಗಾಗಿ ಟೋಲ್ ಫ್ರೀ ಸಂಖ್ಯೆ:1077, ದೂರವಾಣಿ ಸಂಖ್ಯೆ:0820-2574802 ಸಂಪರ್ಕಿಸುವಂತೆ ಹಾಗೂ ಈ ಅವಧಿಯಲ್ಲಿ ಎಲ್ಲಾ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.