ಬಜ್ಪೆಯಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೂ ಕೊರೋನ: ಪೊಲೀಸ್ ಠಾಣೆ ಸೀಲ್ಡೌನ್
ಮಂಗಳೂರು, ಜು.1: ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ಕೊರೋನ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಬಜ್ಪೆಯ ನಿವಾಸಿಗಳಾದ 34 ಹಾಗೂ 26 ವರ್ಷದ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ದನ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಇವರನ್ನು ಬಜ್ಪೆ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬಳಿಕ ವೈದ್ಯರಲ್ಲಿ ಕೊವೀಡ್ ಪರೀಕ್ಷೆಗೆ ಕರೆದೊಯ್ದಿದ್ದರು. ಈ ವರದಿ ಇಂದು ಬಂದಿದ್ದು, ಕೊರೋನ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದ ಎಂಟು ಪೊಲೀಸರಿಗೂ ಸೋಂಕು ತಗುಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವವನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಜ್ಪೆ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story