ಉಡುಪಿ: ಬುಧವಾರ 31 ಮಂದಿಗೆ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಉಡುಪಿ, ಜು.8: ಜಿಲ್ಲೆಯಲ್ಲಿ ಬುಧವಾರ 31 ಮಂದಿಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾಗಿದೆ. ಶಂಕಿತರ ಗಂಟಲುದ್ರವ ಮಾದರಿಯ ಪರೀಕ್ಷೆಯಲ್ಲಿ ಇಂದು 31 ಮಂದಿಗೆ ಸೋಂಕು ದೃಢಪಟ್ಟಿದ್ದರೆ, 236 ಮಂದಿಯ ಮಾದರಿ ನೆಗೆಟಿವ್ ಫಲಿತಾಂಶವನ್ನು ನೀಡಿದೆ. ಬುಧವಾರ ಇನ್ನೂ 720 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ದಿನ ಪಾಸಿಟಿವ್ ಬಂದ 31 ಮಂದಿಯಲ್ಲಿ ವಿದೇಶಗಳಿಂದ ಬಂದ ಮೂವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇವರಲ್ಲಿ ಒಬ್ಬರು ಅಬುದಾಬಿಯಿಂದ ಬಂದವರಾದರೆ, ಇನ್ನಿಬ್ಬರು ಮಸ್ಕತ್ನಿಂದ ಆಗಮಿಸಿದ್ದಾರೆ. ಏಳು ಮಂದಿ ಮಹಾರಾಷ್ಟ್ರದಿಂದ ಬಂದವರಲ್ಲಿ ಇಂದು ಸೋಂಕು ಪತ್ತೆಯಾದರೆ, ಉಳಿದಂತೆ ಹೊರಜಿಲ್ಲೆಯಿಂದ ಬಂದ 9 ಮಂದಿ (ಬೆಂಗಳೂರು 8 ಹಾಗೂ ದ.ಕ. ಒಬ್ಬರು)ಗೆ ಕೊರೋನ ಪಾಸಿಟಿವ್ ಬಂದಿದೆ. ಉಳಿದ 12 ಮಂದಿಯೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಾಧಿತರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
ಸೋಂಕಿತರಲ್ಲಿ ಉಡುಪಿ ತಾಲೂಕಿನ 20 ಮಂದಿ, ಕುಂದಾಪುರ ತಾಲೂಕಿನ 7 ಮಂದಿ ಹಾಗೂ ಕಾರ್ಕಳ ತಾಲೂಕಿನ ನಾಲ್ವರು ಸೇರಿದ್ದಾರೆ. 21 ಮಂದಿ ಪುರುಷರು, 8 ಮಹಿಳೆಯರು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಬುಧವಾರದ 31 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1421ಕ್ಕೇರಿದೆ.
7 ಮಂದಿ ಗುಣಮುಖ: ಜಿಲ್ಲೆಯಲ್ಲಿ ಪಾಸಿಟಿವ್ಗೆ ಚಿಕಿತ್ಸೆ ಪಡೆದು ಗುಣಮುಖರಾದ ಏಳು ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ನಾಲ್ವರು ಹಾಗೂ ಕುಂದಾಪುರದ ಸರಕಾರಿ ಆಸ್ಪತ್ರೆಯಿಂದ ಮೂವರು ಇಂದು ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1189ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 229 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನ ಪರೀಕ್ಷೆಗಾಗಿ ಬುಧವಾರ ಇನ್ನೂ 720 ಮಂದಿಯ ಗಂಟಲು ದ್ರವದ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 132 ಮಂದಿ ಇದ್ದರೆ, ಕೋವಿಡ್ ಸಂಪರ್ಕಿತರು 60 ಮಂದಿ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ 30 ಮಂದಿ ಹಾಗೂ ದೇಶದ ವಿವಿಧ ರಾಜ್ಯಗಳ ಕೋವಿಡ್ ಹಾಟ್ಸ್ಪಾಟ್ಗಳಿಂದ ಬಂದ 495 ಮಂದಿಯ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪಡೆದ ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 20,493ಕ್ಕೇರಿದೆ. ಇವುಗಳಲ್ಲಿ ಈವರೆಗೆ 15,992 ನೆಗೆಟಿವ್, 1421 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 3080 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 24 ಮಂದಿ ಯನ್ನು ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಇವರಲ್ಲಿ 13 ಮಂದಿ ಉಸಿರಾಟ ತೊಂದರೆಯವರು ಹಾಗೂ 11ಮಂದಿ ಶೀತಜ್ವರದಿಂದ ಬಲುವವರು ಸೇರಿದ್ದಾರೆ ಎಂದರು.
ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್ಗಳಿಂದ ಇಂದು 20 ಮಂದಿ ಬಿಡುಗಡೆಗೊಂಡಿದ್ದು, 142 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 27 ಮಂದಿ ಸೇರಿದಂತೆ ಒಟ್ಟು 6072 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1197 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.