ದ.ಕ. : 307 ಮಂದಿಗೆ ಕೊರೋನ ಪಾಸಿಟಿವ್ ದೃಢ, ಕೋವಿಡ್ಗೆ ಆರು ಬಲಿ
8000 ಗಡಿ ದಾಟಿದ ಸೋಂಕಿತರ ಸಂಖ್ಯೆ
ಮಂಗಳೂರು, ಆ.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಎಂಟು ಸಾವಿರದ ಗಡಿ ದಾಟಿದೆ. ಶುಕ್ರವಾರ 307 ಮಂದಿಗೆ ಕೊರೋನ ಪಾಸಿಟಿವ್ ಬಂದಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಕೊರೋನ ಸೋಂಕಿನಿಂದ ಮುಕ್ತರಾದ 242 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಂಗಳೂರು ತಾಲೂಕಿನಲ್ಲಿ 4, ಮೂಡುಬಿದಿರೆ ಹಾಗೂ ಬಂಟ್ವಾಳ ತಲಾ 1 ಮತ್ತು ಇತರ ಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೆ ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಪತ್ತೆಯಾದ 307 ಪಾಸಿಟಿವ್ ಪ್ರಕರಣಗಳ ಪೈಕಿ 44 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 130 ಸಾಮಾನ್ಯ ಶೀತಜ್ವರ ಪ್ರಕರಣ, 9 ಉಸಿರಾಟದ ಸಮಸ್ಯೆಯ ಪ್ರಕರಣ ಪತ್ತೆಯಾಗಿದ್ದು, 124 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.
ದ.ಕ.ಜಿಲ್ಲೆಯಲ್ಲಿ ಇದುವರೆಗೆ 66,056 ಸ್ಯಾಂಪಲ್ಗಳನ್ನು ಪರೀಕ್ಷೆ ನಡೆದಿದ್ದು, 8,387 ಪಾಸಿಟಿವ್ ಮತ್ತು 57,678 ನೆಗೆಟಿವ್ ಕಂಡುಬಂದಿದೆ. ಸದ್ಯ ಆಸ್ಪತ್ರೆಯಲ್ಲಿ 2007 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 6,115 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.