ಉಡುಪಿ: ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಗಮನ ಸೆಳೆದ ‘ಪುಟಾಣಿ ಪೊಲೀಸ್’!
ಉಡುಪಿ, ಆ.15: ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪೊಲೀಸ್ ಸಮವಸ್ತ್ರ ತೊಟ್ಟಿದ್ದ ಮೂರು ವರ್ಷ ಪ್ರಾಯದ ಮಯೂರಿ ಎಲ್ಲರ ಆಕಷರ್ಣೆಯ ಕೇಂದ್ರವಾಗಿ ಗಮನ ಸೆಳೆದಳು.
ಉಡುಪಿ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ಮೆನ್ ಕುಂದಾಪುರ ತಾಲೂಕಿನ ಬೆಳ್ವೆಯ ರಾಘವೇಂದ್ರ ಪ್ರಭು ಎಂಬವರ ಪುತ್ರಿ ಮಯೂರಿಗೆ ಪೊಲೀಸ್, ಮಿಲಿಟರಿ ಅಂದರೆ ಅಚ್ಚುಮೆಚ್ಚು. ಸದಾ ಪೊಲೀಸ್ ಸಮವಸ್ತ್ರ ಹಾಕುವಂತೆ ಹಠ ಹಿಡಿಯುವ ಈಕೆಗೆ ರಾಘವೇಂದ್ರ ಪ್ರಭು, ಸ್ವಾತಂತ್ರೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಸಮವಸ್ತ್ರ ತೊಡಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು.
ಇಡೀ ಕಾರ್ಯಕ್ರಮದಲ್ಲಿ ಪೊಲೀಸರೊಂದಿಗೆ ಇದ್ದ ಈಕೆ ಎಲ್ಲರ ಗಮನ ಸೆಳೆದಳು. ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಹೆಚ್ಚಿನವರು ಆಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.