ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರು ಆರೋಪಿಗಳ ಬಂಧನ
ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆ
ಗಂಗೊಳ್ಳಿ, ಸೆ.19: ಇನ್ಸುಲೇಟರ್ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಸೆ.18ರಂದು ರಾತ್ರಿ 9:30ರ ಸುಮಾರಿಗೆ ಮರವಂತೆಯ ಮಸೀದಿ ಸಮೀಪ ಬಂಧಿಸಿದ್ದಾರೆ.
ಮಂಗಳೂರು ಹರೇಕಳದ ನಿವಾಸಿಗಳಾದ ಮಹಮ್ಮದ್ ಶಾಕಿರ್(24), ಮುಹಮ್ಮದ್ ಜಾಫರ್(32), ಬೈಂದೂರು ಕಿರಿಮಂಜೇಶ್ವರದ ಅಲಾಝ್(20) ಹಾಗೂ ಹೊನ್ನಾವರ ತಾಲೂಕಿನ ಮುಹಮ್ಮದ್ ಯುಸೂಫ್ ಸಾಬ್(45) ಬಂಧಿತ ಆರೋಪಿಗಳು.
ಇನ್ಸುಲೇಟರ್ ವಾಹನದಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಗಂಗೊಳ್ಳಿ ಎಸ್ಸೈ ಭೀಮಾಶಂಕರ್ ಎಸ್. ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 45 ಸಾವಿರ ರೂ. ಮೌಲ್ಯದ 20.63 ಗ್ರಾಂ ತೂಕದ ಗಾಂಜಾ ಮತ್ತು 5 ಮೊಬೈಲ್ ಫೋನ್ಗಳು ಹಾಗೂ ಇನ್ಸುಲೇಟರ್ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story