ಉಡುಪಿ: 215 ಮಂದಿಯಲ್ಲಿ ಕೊರೋನ ಪಾಸಿಟಿವ್, ಓರ್ವ ಬಲಿ
ಶನಿವಾರ 311 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ
ಉಡುಪಿ, ಸೆ.19: ನೋವೆಲ್ ಕೊರೋನ ಸೋಂಕು ಶನಿವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 215 ಮಂದಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದಿರುವ ಒಟ್ಟು ಪ್ರಕರಣಗಳ ಸಂಖ್ಯೆ 15 ಸಾವಿರದ ಗಡಿ ದಾಟಿದ್ದು 15,098ಕ್ಕೇರಿದೆ. ಅಲ್ಲದೇ ಶನಿವಾರ 858 ಮಂದಿಯ ಗಂಟಲುದ್ರವ ಮಾದರಿ ಫಲಿತಾಂಶ ನೆಗೆಟಿವ್ ಆಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 215 ಮಂದಿಯಲ್ಲಿ ಉಡುಪಿ ತಾಲೂಕಿನ 121 ಮಂದಿ, ಕುಂದಾಪುರ ತಾಲೂಕಿನ 50 ಹಾಗೂ ಕಾರ್ಕಳ ತಾಲೂಕಿನ 35 ಮಂದಿ ಸೇರಿದ್ದು, ಹೊರಜಿಲ್ಲೆಯಿಂದ ಉಡುಪಿ, ಮಣಿಪಾಲಕ್ಕೆ ಚಿಕಿತ್ಸೆಗೆಂದು ಬಂದ 9 ಮಂದಿಯಲ್ಲೂ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು.
ಇಂದಿನ 215 ಮಂದಿಯಲ್ಲಿ ಮಕ್ಕಳು ಸೇರಿದಂತೆ 133 ಮಂದಿ ಪುರುಷರು ಹಾಗೂ 82 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 53 ಪುರುಷರು ಹಾಗೂ 50 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.
ಪಾಸಿಟಿವ್ ದೃಢಗೊಂಡ 215 ಮಂದಿಯಲ್ಲಿ 98 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 68 ಮಂದಿ ಶೀತಜ್ವರದಿಂದ ಹಾಗೂ ಮೂವರು ಉಸಿರಾಟದ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸದಿಂದ ಮರಳಿದ ಒಬ್ಬನಲ್ಲಿ ಸೋಂಕು ಕಾಣಿಸಿ ಕೊಂಡಿದೆ. ಉಳಿದಂತೆ 45 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.
311 ಮಂದಿ ಗುಣಮುಖ: ಜಿಲ್ಲೆಯಲ್ಲಿ ಇಂದು ಒಟ್ಟು 311 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 82 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 229 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 13,621ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1337 ಮಂದಿ ಇನ್ನೂ ಚಿಕಿತ್ಸೆ ಯಲ್ಲಿದ್ದಾರೆ. ಇವರಲ್ಲಿ 770 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 567 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆುುತಿದ್ದಾರೆ ಎಂದು ಡಿಎಚ್ಓ ಹೇಳಿದರು.
1054 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶನಿವಾರ ಒಟ್ಟು 1054 ಮಂದಿಯ ಗಂಟಲುದ್ರವದ ಸ್ಯಾಂಪಲ್ಗಳನ್ನು ಪಡೆಯಲಾ ಗಿದೆ. ಇದರಲ್ಲಿ ಕೋವಿಡ್ ಶಂಕಿತರು 808 ಮಂದಿ, ಕೋವಿಡ್ ಸಂಪರ್ಕಿತರು 93 ಮಂದಿ ಇದ್ದರೆ, ಉಸಿರಾಟ ತೊಂದರೆಯ ಇಬ್ಬರು, ಶೀತಜ್ವರದಿಂದ ಬಳಲುವ 46 ಮಂದಿಯ ಸ್ಯಾಂಪಲ್ಗಳು ಸೇರಿವೆ. ಅಲ್ಲದೇ ಹಾಟ್ಸ್ಪಾಟ್ಗಳಿಂದ ಬಂದ 105 ಮಂದಿಯ ಸ್ಯಾಂಪಲ್ನ್ನು ಪರೀಕ್ಷೆಗೆ ಪಡೆಯಲಾಗಿದೆ ಎಂದು ಡಾ.ಸೂಡ ತಿಳಿಸಿದರು.
ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 93,528ಕ್ಕೇರಿದೆ. ಇವುಗಳಲ್ಲಿ ಈವರೆಗೆ 78,240 ನೆಗೆಟಿವ್, 15,098 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 140 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 190ಸ್ಯಾಂಪಲ್ಗಳ ಪರೀಕ್ಷಾ ವರದಿ ಬರೇಕಿದೆ ಎಂದು ಡಾ.ಸೂಡ ಹೇಳಿದರು.
ದಿನದಲ್ಲಿ ಒಂದು ಬಲಿ
ಜಿಲ್ಲೆಯಲ್ಲಿ ಇಂದು ಉಡುಪಿಯ 52 ವರ್ಷ ಪ್ರಾಯದ ಪುರುಷರೊಬ್ಬರು ಕೋವಿಡ್-19 ಸೋಂಕಿನೊಂದಿಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿ ದ್ದಾರೆ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 140ಕ್ಕೇರಿದೆ.
ನ್ಯುಮೋನಿಯಾದೊಂದಿಗೆ ಇತರ ಸಮಸ್ಯೆಯಿಂದ ಬಳಲುತಿದ್ದ ಇವರಲ್ಲಿ ಉಸಿರಾಟದ ತೊಂದರೆಯೊಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.