ಬಿಜೈ: ಮೆಡಿಕಲ್, ಚಿನ್ನದ ಅಂಗಡಿಗೆ ನುಗ್ಗಿದ ಕಳ್ಳರು; ಸೊತ್ತುಗಳಿಗೆ ಹಾನಿ
ಕಳ್ಳತನಕ್ಕೆ ವಿಫಲ ಯತ್ನ
ಮಂಗಳೂರು, ಅ. 2: ಬಿಜೈ ಕಾಪಿಕಾಡ್ನಲ್ಲಿರುವ ಮೆಡಿಪ್ಲಸ್ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿರುವ ಉಪಕರಣಗಳಿಗೆ ಹಾನಿ ಮಾಡಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.ರವಿವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 8:30ರ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಸಿಬ್ಬಂದಿ ಅಂಗಡಿಗೆ ಬಂದು ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಿಜೈ ಕಾಪಿಕಾಡ್ನ ಮೆಡಿಪ್ಲಸ್ ಅಂಗಡಿಯ ಗೋಡೆಯನ್ನು ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಅಂಗಡಿಯ ಕಂಪ್ಯೂಟರ್, ಪ್ರಿಂಟರ್ ಹಾಗೂ ಗಾಜನ್ನು ಹಾನಿಗೊಳಿಸಿದ್ದಾರೆ.
ಕಪಾಟಿನಲ್ಲಿದ್ದ ಔಷಧಿಗಳನ್ನು ಜಾಲಾಡಿದ್ದಾರೆ. ಅಲ್ಲದೆ, 4 ಸಾವಿರ ರೂ. ನಗದು ಕಳವುಗೈದಿದ್ದು, ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಉರ್ವ ಠಾಣಾ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಅದೇ ಕಟ್ಟಡಲ್ಲಿರುವ ಚಿನ್ನದ ಅಂಗಡಿಯೊಂದಕ್ಕೂ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.
ಚಿನ್ನದ ಅಂಗಡಿಯ ಗೋಡೆಯನ್ನು ಕೊರೆದು ಒಳ ನುಗ್ಗಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.