ಶಿವಮೊಗ್ಗ: ವಾಹನ ಢಿಕ್ಕಿ; ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕಿ ಮೃತ್ಯು
ಶಿವಮೊಗ್ಗ, ಎ. 21: ಸರಕು ಸಾಗಾಟದ ಮಹೇಂದ್ರ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕಿಯೋರ್ವಳು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಹರಮಘಟ್ಟ ಕ್ರಾಸ್ ಬಳಿ ನಡೆದಿದೆ.
ಅತೀಕ್ ಅಹಮದ್ ಎಂಬುವರ ಪುತ್ರಿ ಅಂಜುಂ (4) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.
ವಾಹನ ಚಾಲಕನ ಅಜಾಗರೂಕ, ವೇಗದ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story