ಸಿದ್ದರಾಮಯ್ಯ ಕೊಪ್ಪಳದಿಂದ ಸ್ಪರ್ಧಿಸಲಿ: ಕಾಂಗ್ರೆಸ್ ಮುಖಂಡರ ಒತ್ತಾಯ
ಬೆಂಗಳೂರು, ಸೆ. 1: ಲೋಕಸಭಾ ಚುನಾವಣೆಗೆ ನಮ್ಮ ಜಿಲ್ಲೆಯಿಂದ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡಲಿದ್ದು, ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನಿಂದ ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮುಖಂಡರು, ಲೋಕಸಭೆ ಚುನಾವಣೆಯಲ್ಲಿ ಬಸವರಾಜ್ ಬಾದರ್ಲಿ, ಬಸವರಾಜ ರಾಯರೆಡ್ಡಿ, ಕರಿಯಣ್ಣ ಮತ್ತು ಇಕ್ಬಾಲ್ ಅನ್ಸಾರಿ ಸೇರಿ ಆರು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಸ್ಥಳೀಯ ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ. ‘ಪಕ್ಷ ಸಂಘಟನೆ, ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದರೆ ನಾವೆಲ್ಲ ಬೆಂಬಲಿಸುತ್ತೇವೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಮುಂಬರಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಥಳೀಯ ಮುಖಂಡರಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ವೇಣುಗೋಪಾಲ್ ಜಿಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
‘ಅನ್ನಭಾಗ್ಯ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ನೀಡಿದ್ದರೂ, ನಮ್ಮ ಪಕ್ಷದ ಪ್ರಮುಖ ನಾಯಕರನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದೀಗ ಲೋಕಸಭೆ ಸ್ಪರ್ಧೆಗೆ ವಿವಿಧ ಜಿಲ್ಲೆಗಳಿಂದ ಆಹ್ವಾನ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತನಾಡುವುದಿಲ್ಲ’
-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ