ರಣಜಿ ಕ್ರಿಕೆಟ್: ಶಿವಮೊಗ್ಗ-ಬೆಳಗಾವಿಯಲ್ಲಿ ತಲಾ ಒಂದು, ಮೈಸೂರಿನಲ್ಲಿ 2 ಪಂದ್ಯವನ್ನಾಡಲಿರುವ ಕರ್ನಾಟಕ ತಂಡ
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಸೆ. 9: 2018-19 ನೇ ಸಾಲಿನ ರಣಜಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ಎಲೈಟ್ ಗುಂಪಿನಲ್ಲಿ ಸ್ಥಾನ ಪಡೆದಿದೆ. ತವರೂರಲ್ಲಿ ಒಟ್ಟಾರೆ ನಾಲ್ಕು ಪಂದ್ಯಗಳನ್ನಾಡಲಿದೆ. ಶಿವಮೊಗ್ಗ, ಮೈಸೂರು, ಬೆಳಗಾವಿಯಲ್ಲಿರುವ ಕೆಎಸ್ಸಿಎ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿವೆ.
ನವೆಂಬರ್ 20 ರಿಂದ 23 ರವರೆಗೆ ಮೈಸೂರಲ್ಲಿ ಕರ್ನಾಟಕ - ಮುಂಬಯಿ, ಬೆಳಗಾವಿಯಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 1 ರವರೆಗೆ ಕರ್ನಾಟಕ - ಮಹಾರಾಷ್ಟ್ರ, ಮೈಸೂರಲ್ಲಿ ಡಿಸೆಂಬರ್ 22 ರಿಂದ ಡಿ. 25 ರವರೆಗೆ ಕರ್ನಾಟಕ - ರೈಲ್ವೇಸ್ ಹಾಗೂ ಶಿವಮೊಗ್ಗದಲ್ಲಿ ಡಿ. 30 ರಿಂದ ಜನವರಿ 2 ರವರೆಗೆ ಕರ್ನಾಟಕ - ಛತ್ತೀಸ್ಗಢ ರಾಜ್ಯದ ನಡುವೆ ರಣಜಿ ಕ್ರಿಕೆಟ್ ಪಂದ್ಯಗಳು ನಡೆಯಲಿದೆ.
ಎಲೈಟ್ ಗುಂಪಿನಲ್ಲಿ ಒಟ್ಟಾರೆ ಕರ್ನಾಟಕವು 8 ಪಂದ್ಯಗಳನ್ನಾಡಲಿದೆ. ಇದರಲ್ಲಿ 4 ಪಂದ್ಯಗಳ ಆತಿಥ್ಯವನ್ನು ಕೆಎಸ್ಸಿಎ ವಹಿಸಿಕೊಳ್ಳುತ್ತಿದೆ. ಕರ್ನಾಟಕ ಕ್ರಿಕೆಟ್ ತಂಡವು ಲೀಗ್ನ ತನ್ನ ಕಡೆಯ ಪಂದ್ಯವನ್ನು ಛತ್ತೀಸಗಢ ರಾಜ್ಯದ ಎದುರು ಆಡಲಿದ್ದು, ಈ ಪಂದ್ಯ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.
ಶಿವಮೊಗ್ಗದತ್ತ ಚಿತ್ತ: ಶಿವಮೊಗ್ಗದ ಕೆಎಸ್ಸಿಎ ಕ್ರಿಕೆಟ್ ಮೈದಾನವು ಬಿಸಿಸಿಐನಿಂದ ದಕ್ಷಿಣ ಭಾರತದ ಅತ್ಯುತ್ತಮ 'ಟರ್ಫ್ ವಿಕೆಟ್' ಪ್ರಶಸ್ತಿಗೆ ಪಾತ್ರವಾಗಿದೆ. ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ಮತ್ತು ಹೈದರಾಬಾದ್ ನಡುವೆ ಇಲ್ಲಿ ಆಯೋಜಿತವಾಗಿದ್ದ ಪಂದ್ಯ ಅತ್ಯಂತ ಅಚ್ಚುಕಟ್ಟಾಗಿ ನಡೆದಿತ್ತು.
ಪ್ರಸ್ತುತ ರಣಜಿ ಋತುವಿನಲ್ಲಿಯೂ ಪಂದ್ಯವೊಂದಕ್ಕೆ ಆತಿಥ್ಯ ನೀಡುತ್ತಿರುವುದು, ಸ್ಥಳೀಯ ಕ್ರಿಕೆಟ್ ಪ್ರಿಯರಲ್ಲಿ ಸಂತಸ ಉಂಟು ಮಾಡಿದೆ. ಮತ್ತೊಂದೆಡೆ ಶಿವಮೊಗ್ಗ ಕೆಎಸ್ಸಿಎ ವಲಯವು ಈ ಪಂದ್ಯಕ್ಕೆ ಈಗಿನಿಂದಲೇ ಪೂರ್ವಭಾವಿ ಸಿದ್ದತೆಗಳನ್ನು ನಡೆಸಲಾರಂಭಿಸಿದೆ.
ಯಶಸ್ವಿ: ಈ ಹಿಂದೆ ಶಿವಮೊಗ್ಗ ನಗರದಲ್ಲಿ ಕರ್ನಾಟಕ- ಉತ್ತರ ಪ್ರದೇಶ ರಣಜಿ ಪಂದ್ಯ, ಭಾರತ ಎ - ವೆಸ್ಟ್ ಇಂಡೀಸ್ 'ಎ' ನಡುವಿನ ಅನಧಿಕೃತ ಟೆಸ್ಟ್ ಪಂದ್ಯ, ದಕ್ಷಿಣ ವಲಯ ಅಂತಾರಾಜ್ಯ ಟಿ-20 ಕ್ರಿಕೆಟ್ ಪಂದ್ಯ, 19 ವರ್ಷದೊಳಗಿನವರ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆದಿದ್ದವು.