ಬಿಜೆಪಿಯ ಹತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಚಿವ ಸಾ.ರಾ.ಮಹೇಶ್
ಮೈಸೂರು,ಸೆ.12: ಬಿಜೆಪಿಯ ಹತ್ತು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೂ 20 ವರ್ಷ ಬಿಜೆಪಿಯಲ್ಲಿದ್ದವನು. ನಮಗೂ ರಾಜಕಾರಣ ಮಾಡಲು ಬರುತ್ತೆ. ಈಗಾಗಲೇ ಬಿಜೆಪಿಯ ಹತ್ತು ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ನಾವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ಈ ನಡುವೆ ಕೆಲ ಬಿಜೆಪಿ ಮುಖಂಡರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಲ್ಲ ಸಲ್ಲದ ಆಸೆ ತೋರಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಲ್ಲಿ ಒಬ್ಬರನ್ನು ಸೆಳೆಯಲು ಯತ್ನಿಸಿದರೆ, ಜೆಡಿಎಸ್ ನಾಯಕರು ಮತ್ತು ಮುಖಂಡರ ಶಕ್ತಿ ಏನು ಎಂದು ಗೊತ್ತಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.
ನಮ್ಮ ಪಕ್ಷದ ಶಾಸಕರು ಎಲ್ಲರೂ ಒಳ್ಳೆಯವರಿದ್ದಾರೆ. ಯಾರೂ ಅಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ. ಸರಕಾರ ಅಸ್ಥಿರಗೊಳಿಸುವ ಯತ್ನಕ್ಕೆ ಬಿಜೆಪಿ ನಾಯಕರು ಕೈ ಹಾಕಿದರೆ ನಮ್ಮ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.