ಬೆಳಗಾವಿ ಯುವತಿಯ ಬಲಿ ಪಡೆದ ಗೋವಾ ಶಾಸಕನ ಕಾರು
ಆಕ್ರೋಶಿತ ಜನರಿಂದ ಕಾರಿಗೆ ಬೆಂಕಿ ಹಚ್ಚಲು ಯತ್ನ
ಬೆಳಗಾವಿ, ಅ.9: ಗೋವಾ ಶಾಸಕ ಗ್ಲೆನ್ ಟಿಕ್ಲೊ ಅವರ ಬಿಎಂಡಬ್ಲ್ಯು ಕಾರು ಢಿಕ್ಕಿ ಹೊಡೆದ ಪರಿಣಾಮ 20ರ ಯುವತಿಯೊಬ್ಬಳು ಮೃತಪಟ್ಟು ಆಕೆಯ ಸಹೋದರಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿಯ ಗಾಂಧಿನಗರ ಬಳಿ ಇಬ್ಬರು ಯುವತಿಯರು ರಸ್ತೆ ಅಡ್ಡ ದಾಟುತ್ತಿದ್ದಾಗ ಶಾಸಕನ ಪುತ್ರ ಕೈಲ್ ಟಿಕ್ಲೊ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ನಿನ್ನೆ ಮುಸ್ಸಂಜೆ ವೇಳೆ ಈ ಘಟನೆ ನಡೆದಿದ್ದು, ಉದ್ರಿಕ್ತ ಜನರ ಗುಂಪು ಕಾರಿನ ಗಾಜು ಪುಡಿ ಮಾಡಿ ಬೆಂಕಿ ಹಚ್ಚುವ ಪ್ರಯತ್ನ ನಡೆಸಿತು ಎಂದು ಪ್ರತ್ಯಕ್ಷದರ್ಶಿ ಎಂ.ಕಿಲ್ಲೇದಾರ್ ಹೇಳಿದ್ದಾರೆ. ಗುಂಪು ಸೇರಿದ್ದ ಜನ ಸುಮಾರು 15 ನಿಮಿಷ ಕಾಲ ಹೆದ್ದಾರಿ ತಡೆ ನಡೆಸಿದರು.
ಕೈಲ್ ಟಿಕ್ಲೊ (25) ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ. ರಭಸದ ಹಾಗೂ ನಿರ್ಲಕ್ಷ್ಯದ ಚಾಲನೆ ಪ್ರಕರಣವನ್ನು ಕೈಲ್ ವಿರುದ್ಧ ದಾಖಲಿಸಲಾಗಿದೆ. ಅತಿವೇಗದಿಂದ ಕಾರು ಚಲಾಯಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಬೆಳಗಾವಿಯ ಆಝಾದ್ ನಗರದ ತಮ್ರೀನ್ ಖಾಲಿದ್ ಬಿಸ್ಪಿ ಮತ್ತು ಆಕೆಯ ಸಹೋದರಿ ತೆಹಾನಿಯಾತ್ ಅವರು ಹಣ್ಣಿನ ಮಾರುಕಟ್ಟೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇಬ್ಬರನ್ನೂ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ, ತಮ್ರೀನ್ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು.