ಮೈಸೂರು; ವಾಹನ ಕಳ್ಳನ ಬಂಧನ: 50 ಲಕ್ಷ ರೂ. ಮೌಲ್ಯದ 3 ಕಾರು, 2 ಬೈಕ್ ವಶ
ಮೈಸೂರು,ನ.12: ವಾಹನ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಖದೀಮನೋರ್ವನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 50 ಲಕ್ಷ ರೂ. ಮೌಲ್ಯದ 3 ಕಾರು ಹಾಗೂ 2 ಬೈಕ್ಗಳನ್ನು ವಶಪಡಿಸಿಕೊಂಡು 5 ಪ್ರಕರಣಗಳನ್ನು ಬೇಧಿಸಿದ್ದಾರೆ. ಬೆಂಗಳೂರಿನ ನ್ಯೂ ಗುರಪ್ಪಪಾಳ್ಯ ಪಿಲ್ಲಾಕಲ್ ನಜೀರ್(56) ಬಂಧಿತ ಆರೋಪಿ.
ಸೆ.2 ರಂದು ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ಮಾಂಡೊವಿ ಮೋಟಾರ್ಸ್ ಕಾರ್ ಶೋರೂಂ ನಲ್ಲಿ ಸರ್ವೀಸ್ ಮಾಡಿ, ಡೆಲಿವರಿಗಾಗಿ ಆವರಣದಲ್ಲಿ ನಿಲ್ಲಿಸಿದ್ದ ಕಾರನ್ನು ಕೊಂಡುಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಾಲಕರು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬೆಂಗಳೂರಿನಲ್ಲಿ ನ.6ರಂದು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ದೇವರಾಜ ಮತ್ತು ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಾರು ಕಳ್ಳತನ ಹಾಗೂ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
50 ಲಕ್ಷ ರೂ ಮೌಲ್ಯದ 3 ಕಾರುಗಳು (ಮಾರುತಿ ಎಸ್ ಕ್ರಾಸ್-1, ಮಾರುತಿ 800-1, ಇನ್ನೊವಾ ಕ್ರಿಸ್ಟ -1) ಹಾಗೂ 2 ದ್ವಿಚಕ್ರ ವಾಹನಗಳನ್ನು (ಹೊಂಡಾ ಆಕ್ಟಿವಾ-1, ಟಿ.ವಿ.ಎಸ್ ಎನ್ಟಾರ್ಕ್-1) ವಶಪಡಿಸಿಕೊಳ್ಳಲಾಗಿದೆ.
ಈತನ ಬಂಧನದಿಂದ ಮೈಸೂರು ನಗರ ದೇವರಾಜ ಪೊಲೀಸ್ ಠಾಣೆಯ 2, ವಿಜಯನಗರ ಠಾಣೆಯ 1, ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ 1 ಮತ್ತು ಹಲಸೂರು ಪೊಲೀಸ್ ಠಾಣೆಯ 1 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.