ಮೈಸೂರು: ಬಾಲಕಿಯ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಮೈಸೂರು,ಡಿ.7: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೋರ್ವನಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 26 ಸಾವಿರ ರೂ.ದಂಡವನ್ನು ವಿಧಿಸಿದೆ.
ಕೊಮ್ಮೇಗೌಡನ ಕೊಪ್ಪಲು ಗ್ರಾಮದ ನಿವಾಸಿ ಸೋಮೇಶ(35) ಶಿಕ್ಷೆಗೊಳಗಾದ ವ್ಯಕ್ತಿ. ಬಾಲಕಿ ಗ್ರಾಮವೊಂದರಲ್ಲಿ ತನ್ನ ಸೋದರತ್ತೆಯ ಮನೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು. 2017ರ ನವೆಂಬರ್ 19ರಂದು ಸ್ತ್ರೀ ಶಕ್ತಿ ಸಂಘದ ಸಭೆಗಾಗಿ ಸೋದರ ಅತ್ತೆಯು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದು, ಸೋಮೇಶ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಬಳಿಕ ಮನೆಗೆ ಬಂದ ಸೋದರತ್ತೆ ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದರು. ವಿಚಾರಣೆಯ ವೇಳೆ ವೈದ್ಯಕೀಯ ವರದಿ ಹಾಗೂ ಸಾಂದರ್ಭಿಕ ಸಾಕ್ಷಿಗಳು ಆರೋಪಿ ಅತ್ಯಾಚಾರವೆಸಗಿರುವುದನ್ನು ಸಾಬೀತುಪಡಿಸಿದ್ದು, ನ್ಯಾಯಾಧೀಶರಾದ ಎಸ್.ಜಯಶ್ರೀ ಆರೋಪಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 26 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವಿಶೇಷ ಸರಕಾರಿ ಅಭಿಯೋಜಕ ಬಿ.ಸಿ.ಶಿವರುದ್ರಸ್ವಾಮಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.