ಮದುವೆಯಾಗುವುದಾಗಿ ಹೇಳಿ ಬಾಲಕಿಗೆ ಲೌಂಗಿಕ ದೌರ್ಜನ್ಯ: ಆರೋಪ
ಆರೋಪಿ ಸಹಿತ ಮೂವರ ಬಂಧನ
ಕಡೂರು, ಜ.11: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪಟ್ಟಣದ ಮಲ್ಲೇಶ್ವರ ಬಡಾವಣೆ ನಿವಾಸಿ ಮಣಿ ಎಂಬಾತನನ್ನು ಕಡೂರು ಪೋಲಿಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ವರದಿಯಾಗಿದೆ.
ಕಳೆದ ಡಿಸೆಂಬರ್ 10ರಂದು ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ವಾಸವಾಗಿದ್ದ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪಟ್ಟಣದ ಮಲ್ಲೇಶ್ವರ ಬಡಾವಣೆ ನಿವಾಸಿ ಮಣಿ(25) ಎಂಬಾತ ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿದ್ದಲ್ಲದೇ ಮದುವೆಯಾಗುವುದಾಗಿ ಹೇಳಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ನಂತರ ಆಕೆಯನ್ನು ಹೆದರಿಸಿ ಮದುವೆಯಾಗುವ ಉದ್ದೇಶದಿಂದ ಅಪಹರಿಸಿದ್ದಾನೆ.
ಹೀಗೆ ಬಾಲಕಿಯನ್ನು ಕರೆದೊಯ್ಯುವಾಗ ಅಪ್ರಾಪ್ತ ವಯಸ್ಸಿನವಳಾಗಿರುವ ಬಾಲಕಿಯನ್ನು ಪುಸಲಾಯಿಸಿರುವ ಮಣಿ ಹಾಗೂ ಆತನ ಸಂಬಂಧಿಕರಾದ ವನಿತಾ ಹಾಗೂ ವಿಷ್ಣು ಎಂಬವರು ತನ್ನ ಮನೆಯಲ್ಲಿದ್ದ 32 ಸಾವಿರ ರೂ. ಹಣವನ್ನು ತನ್ನ ಮಗಳ ಮೂಲಕ ತರಿಸಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಬಾಲಕಿ ಪೋಷಕಿ ರೇಣುಕಾ ಎಂಬವರು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ತನಿಖೆ ಆರಂಭಿಸಿದ ಕಡೂರು ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕಿ ಪತ್ತೆಗೆ ಮುಂದಾಗಿದ್ದರು. ಜ.9ರಂದು ತೀರ್ಥಹಳ್ಳಿ ಸಮೀಪದ ಗ್ರಾಮವೊಂದರಲ್ಲಿ ಬಾಲಕಿಯೊಂದಿಗೆ ಮಣಿ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಬಾಲಕಿ ಪೋಷಕರು ನೀಡಿದ ದೂರಿನಂತೆ ಆರೋಪಿ ಮಣಿ ಹಾಗೂ ಆತನಿಗೆ ನೆರವಾದ ವನಿತಾ ಮತ್ತು ವಿಷ್ಣು ಎಂಬವರನ್ನು ಪೊಕ್ಸೊ ಹಾಗೂ ಬಾಲ್ಯ ವಿವಾಹ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆಂದು ತಿಳಿದು ಬಂದಿದೆ.