ಕೊನೆಗೂ ಕಂಪ್ಲಿ ಶಾಸಕ ಗಣೇಶ್ ಬಂಧನ
ಬೆಂಗಳೂರು, ಫೆ.20: ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪದಡಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅನ್ನು ಇಲ್ಲಿನ ಬಿಡದಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊರ ರಾಜ್ಯದಲ್ಲಿ ಆರೋಪಿ ಗಣೇಶ್ ಅನ್ನು ಬಂಧಿಸಿರುವ ಪೊಲೀಸರು, ಇಂದು(ಗುರುವಾರ) ರಾಮನಗರ ಜಿಲ್ಲಾ ನ್ಯಾಯಾಧೀಶರು ಅಥವಾ ರಾಜಧಾನಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ರಾಜ್ಯದಲ್ಲಿ ಗಣೇಶ್ ಬಂಧನವಾಗಿದೆ ಎನ್ನಲಾಗಿದ್ದು, ಬಿಡದಿ ಪೊಲೀಸರ ತಂಡವು 3 ತಂಡ, ಮುಂಬೈ, ಅಂಡಮಾನ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣೇಶ್ ಅವರಿಗಾಗಿ ಹುಡುಕಾಟ ನಡೆಸಿತ್ತು.
ಆದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ, ಇತ್ತೀಚಿಗೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ ಶಾಸಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜನವರಿ 20ರಂದು ಬಿಡದಿ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪಡಿ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು), 506(ಜೀವ ಬೆದರಿಕೆ) ಪ್ರಕರಣ ದಾಖಲಾಗಿತ್ತು. ಇನ್ನು ಗಣೇಶ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ.
ಬಳ್ಳಾರಿ ಜಿಲ್ಲೆಯ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಶಾಸಕ ಕಂಪ್ಲಿ ಗಣೇಶ್ ಅವರನ್ನು ಗುಜರಾತ್ ನ ಸೋಮನಾಥದಲ್ಲಿ ಬಂಧಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ದೃಢಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಫೆ.20ರ ಮಧ್ಯಾಹ್ನ 2ಗಂಟೆಯ ಸುಮಾರಿಗೆ ಕಂಪ್ಲಿ ಗಣೇಶ್ನನ್ನು ಬಂಧಿಸಿದ್ದು, ಗುಜರಾತ್ನಿಂದ ವಿಮಾನದ ಮೂಲಕ ತಡರಾತ್ರಿ ಬೆಂಗಳೂರಿಗೆ ಕರೆತಲಾಗುವುದು ಎಂದು ಹೇಳಿದರು.
ನಾಳೆ(ಫೆ.21) ರಾಮನಗರ ಜಿಲ್ಲಾ ಸೇಷನ್ಸ್ ಕೋರ್ಟ್ಗೆ ಹಾಜರುಪಡಿಸಲಾಗುವುದು. ಗಣೇಶ್ ಅವರನ್ನು ಹೇಗೆ ಬಂಧಿಸಲಾಯಿತು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಎಂ.ಬಿ.ಪಾಟೀಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.