ಪ್ರಚಾರದಲ್ಲಿ ನಾವು ಬಿಜೆಪಿಗಿಂತ ಮುಂದಿದ್ದೇವೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ, ಫೆ. 21: ಲೋಕಸಭೆ ಚುನಾವಣೆಗೆ ಪಕ್ಷದ ಎಲ್ಲ ಸಿದ್ದತೆ ನಡೆಸಿದ್ದು, ಪ್ರಚಾರದಲ್ಲಿ ಬಿಜೆಪಿಗಿಂತ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಮೈತ್ರಿ, ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆ ಸಂಬಂಧ ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ. ಆದರೆ, ಚುನಾವಣೆಗೆ ಎಲ್ಲ ಸಿದ್ದತೆ ನಡೆಸಿದ್ದೇವೆ. ಈಗಾಗಲೇ ಚುನಾವಣಾ ಸಮಿತಿ ಸಭೆ ನಡೆಸಲಾಗಿದೆ ಎಂದರು.
ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ನನ್ನನ್ನು ಭೇಟಿ ಮಾಡಿದ್ದರು. ಮಂಡ್ಯ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡುವ ಸಂಬಂಧ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಸುಮಲತಾ ಸ್ಪರ್ಧೆಗೆ ಮಂಡ್ಯದ ಕೆಲವರು ಒತ್ತಾಯಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಕರೆತರಲಾಗುವುದು ಎಂದ ಅವರು, ರಾಹುಲ್ ಗಾಂಧಿಯವರು ಪ್ರಧಾನಿಯಾಗುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋಲು ಖಚಿತ. ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿಯವರು ಜನರಿಗೆ ನೀಡಿದ್ದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, ದೇಶದ ಜನತೆ ಮೋದಿ ವಿರುದ್ಧ ಇದ್ದಾರೆ’
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ