ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ದಾವಣಗೆರೆ,ಮಾ.27: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ವಿಶೇಷ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಹೊನ್ನಾಳಿ ತಾಲೂಕಿನ ಪಾಲವನಹಳ್ಳಿ ಗ್ರಾಮದ ಶಿವು(21) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಅದೇ ತಾಲೂಕಿನ ಅಪ್ರಾಪ್ತೆಯನ್ನು ಪುಸಲಾಯಿಸಿ 2017 ರ ಡಿ.5 ರಂದು ಶಿವಮೊಗ್ಗದ ಜಕಾತಿ ಕೊಪ್ಪ ಜಾತ್ರೆಗೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವು ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಕಲಂ 4(ಫೋಕ್ಸೋ) 2012ರ ಅಡಿ ಮತ್ತು ಐಪಿಸಿ ಕಾಯ್ದೆ 366, 376ರಡಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಫೋಕ್ಸೋ ಕಾಯ್ದೆಯಡಿ ಆರೋಪಿ ಶಿವು ವಿರುದ್ಧದ ಆರೋಪಗಳು ಸಾಕ್ಷ್ಯಾದಾರ ಸಮೇತ ಸಾಬೀತಾದವು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ(ಫೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ನಾಗಶ್ರೀ ಅವರು ಅಪರಾಧಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರು. ದಂಡ ವಿಧಿಸಿದರು. ಸರ್ಕಾರದ ಪರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಶೌಕತ್ ಅಲಿ ಎಸ್.ಎಸ್.ಎಚ್.ವಾದ ಮಂಡಿಸಿದ್ದರು.