ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ
ಹಾಸನ,ಎ.19: ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ನಂತರ ಹಣ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತಪಟ್ಟ ಘಟನೆ ತಾಲೂಕಿನ ಬದುಕರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲತೇಶ್ ಕುಮಾರ್(24) ಮೃತ ಯುವಕ. ಈತ ಹಾಸನದ ರಾಜೀವ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಐಪಿಎಲ್ನಲ್ಲಿ ಬೆಟ್ಟಿಂಗ್ ಕಟ್ಟಿದ್ದ ಆತ ಹಣ ಕಳೆದುಕೊಂಡಿದ್ದನು. ಬಳಿಕ ಸ್ನೇಹಿತರ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಎನ್ನಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಲತೇಶ್ ಕಳೆದ 1 ತಿಂಗಳಿನಿಂದ ಪ್ರತಿ ಪಂದ್ಯದ ಮೇಲೂ ಬೆಟ್ಟಿಂಗ್ ಕಟ್ಟುತ್ತಿದ್ದ. ಹೀಗಾಗಿ ಹಲವು ಬಾರಿ ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್ನಲ್ಲಿ ಸೋತ ಲತೇಶ್ ಕುಮಾರ್ ಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಆತ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.