ದಾವಣಗೆರೆ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನ | Vartha Bharati- ವಾರ್ತಾ ಭಾರತಿ

---

ದಾವಣಗೆರೆ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನ

ದಾವಣಗೆರೆ,ಎ.23: ಕೆಲವು ಸಣ್ಣ ಪುಟ್ಟ ಸಮಸ್ಯೆ ಹೊರತು ಪಡಿಸಿ ಮಂಗಳವಾರ ನಡೆದ ರಾಜ್ಯದ ಎರಡನೇ ಹಂತದ ಮತದಾನ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆದಿದೆ. 

ಬೆಳ್ಳಂಬೆಳಗ್ಗೆ ಚುರುಕಿನಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಮತದಾರರು ಹುರುಪಿನಿಂದಲೇ ಮತದಾನದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಬಿಸಿಲಿಗೆ ಮತದಾರರು ಬರುವುದು ತುಸು ನಿಧಾನವಾದರೂ ಸಂಜೆಯಾಗುತ್ತಲೇ ಮತ್ತೆ ಮತಕಣ ಚುರುಕು ಪಡೆದುಕೊಂಡಿತು. ಯುವ ಮತದಾರರು ಸೇರಿದಂತೆ ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಮತದಾನ ಮಾಡುವುದಕ್ಕಾಗಿಯೇ ಅಮೇರಿಕಾ ಸೇರಿದಂತೆ ಬೆಂಗಳೂರು, ಕೇರಳ ಹಾಗೂ ವಿವಿಧ ಭಾಗಗಳಿಂದ ಮತದಾರರು ಆಗಮಿಸಿದ್ದು ವಿಶೇಷವಾಗಿತ್ತು. ಚುನಾವಣಾ ಸಿಬ್ಬಂದಿ ಬೆಳಗ್ಗೆ 6.30ರ ಗಂಟೆ ವೇಳೆಗೆ ಅಣಕು ಮತದಾನ ನಡೆಸಿ ಮತದಾನ ಯಂತ್ರ ಸರಿಯಿರುವುದನ್ನು ಖಚಿತ ಪಡಿಸಿಕೊಂಡು 7 ಗಂಟೆಗೆ ಮತದಾನಕ್ಕೆ ಅನುವು ಮಾಡಿಕೊಟ್ಟರು. 

ಯಾವ ಸಮಯಕ್ಕೆ ಎಷ್ಟು ಮತದಾನ?

ಜಿಲ್ಲೆಯಲ್ಲಿ ಬೆಳಗ್ಗೆ 9ಕ್ಕೆ ಶೇ.7.38ರಷ್ಟಾಗಿದ್ದ ಮತದಾನ, 11 ಗಂಟೆ ವೇಳೆಗೆ ಶೇ. 20.33 ರಷ್ಟಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.37.98ರಷ್ಟಾಗಿದ್ದ ಮತದಾನ 3 ಗಂಟೆ ಸಮಯಕ್ಕೆ ಶೇ. 53.90ರಷ್ಟು ಆಗಿತ್ತು. 5 ಗಂಟೆ ವೇಳೆಗೆ 66.73ರಷ್ಟು ಮತದಾನವಾಗಿತ್ತು.

ಮತದಾರರ ಪಟ್ಟಿಯಲ್ಲಿಲ್ಲ ಹೆಸರು: ಜಿಲ್ಲೆಯ ಅನೇಕ ಮತಗಟ್ಟೆಗಳ ಮತಪಟ್ಟಿಯಲ್ಲಿ ಮತದಾರರ ಹೆಸರುಗಳೇ ನಾಪತ್ತೆಯಾಗಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ, ಈ ಬಾರಿ ಮತದಾನ ಮಾಡಲು ಆಗಮಿಸಿದ್ದ ವೇಳೆ  ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಬೇಸರಗೊಂಡು ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅನೇಕರು ಬಂದ ದಾರಿಗೆ ಸುಂಕವಿಲ್ಲದೆ ವಾಪಾಸ್ಸಾದರು.

ಕೈಕೊಟ್ಟ ಮತಯಂತ್ರಗಳು
ಈ ಬಾರಿ ಅನೇಕ ಮತಯಂತ್ರಗಳು ಕೆಲ ಸಮಯ ಕೈಕೊಟ್ಟಿದ್ದರಿಂದ ಮತದಾನಕ್ಕೆ ಅಡ್ಡಿಯಾಯಿತು. ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಮತಯಂತ್ರ ದೋಷದಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ಇವಿಎಂ ಬದಲಿಸಿ ಮತದಾನಕ್ಕೆ ಚಾಲನೆ ನೀಡಿದರು. ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಮತ ಕೂಡ ಇದೇಬೂತ್ ನಲ್ಲಿತ್ತು. ಇವಿಎಂ ಸರಿಪಡಿಸಿದ ನಂತರ ಶಾಸಕ ರವೀಂದ್ರನಾಥ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮತದಾನ ಮಾಡುವ ವೇಳೆ ಇವಿಎಂ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ದಾವಣಗೆರೆಯ 236ನೇ ಮತಗಟ್ಟೆ ಮಾಗನೂರು ಬಸಪ್ಪ ಶಾಲೆಯ ಮತದಾನ ಕೇಂದ್ರದಲ್ಲಿ ಸಿದ್ದೇಶ್ವರ್ 3 ನಿಮಿಷ ಕಾದು ಕುಳಿತು, ಮತಯಂತ್ರ ಸರಿಯಾದ ನಂತರ ಮತದಾನ ಮಾಡಿದರು.

ಅದೇರೀತಿ, ಹರಪನಹಳ್ಳಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಮತಗಟ್ಟೆ ಸಂಖ್ಯೆಗಳಲ್ಲಿ ಬದಲಾವಣೆಯಾದ ಕಾರಣ ಕೆಲಕಾಲ ಗೊಂದಲವಾಗಿತ್ತು. ಹರಿಹರ ತಾಲೂಕಿನ ಇಂಗಳಗೊಂದಿಯಲ್ಲಿ ಮಂತಯಂತ್ರ ದೋಷ ಕಂಡುಬಂತು. ಜಗಳೂರಿನ 4 ಮತಗಟ್ಟೆ ಕೇಂದ್ರಗಳಲ್ಲಿ ಮತಯಂತ್ರದಲ್ಲಿ ದೋಷಕಾಣಿಸಿಕೊಂಡಿದ್ದು, ಎಲ್ಲೆಡೆ ಕೆಲ ಸಮಯ ತಡವಾಗಿ ಮತದಾನ ಆರಂಭಗೊಂಡಿತು.

ಮತದಾನ ಬಹಿಷ್ಕಾರ, ಮನವೊಲಿಕೆ:
ಮೂಲಸೌಲಭ್ಯ ಕಲ್ಪಿಸದ ಹಿನ್ನಲೆಯಲ್ಲಿ ಮಾಯಕೊಂಡ ಕ್ಷೇತ್ರದ ಬೋರಗೊಂಡನಹಳ್ಳಿ, ರಾಮಪುರ, ಚನ್ನಗಿರಿ ತಾಲೂಕಿನ ಎನ್. ಬಸವನಹಳ್ಳಿ, ಹರಪ್ಪನಹಳ್ಳಿ ತಾಲೂಕಿನ ಕರೇಕಾನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ಜರುಗಿದೆ. ಬೆಳಗ್ಗೆ 8.30ವರೆಗೂ ಮತದಾನ ಮಾಡದೇ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಬಳಿಕ ಅಧಿಕಾರಿಗಳ ಮನವಿ, ಮನವೊಲಿಕೆಯ ನಂತರ ಮತದಾನ ಸುಸೂತ್ರವಾಗಿ ನಡೆಯಿತು.

ಮೊದಲ ಮತದಾನದ ಸಂಭ್ರಮ:
ಜಿಲ್ಲೆಯಲ್ಲಿ ಈ ಬಾರಿ 1.5 ಲಕ್ಷ ಯುವ ಮತದಾರರು ಸರದಿ ಸಾಲಲ್ಲಿ ನಿಂತು ಮೊದಲ ಮತದಾನ ಮಾಡಿ ಸಂಭ್ರಮಿಸಿದರು. ಯುವಕ, ಯುವತಿಯರು ಹಕ್ಕು ಚಲಾವಣೆ ಮಾಡಿ ಶಾಯಿ ಹಚ್ಚಿದ್ದ ಬೆರಳ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಸಂಭ್ರಮಪಟ್ಟರು.

ಸಖಿ ಮತಗಟ್ಟೆಗಳು: ಜಿಲ್ಲೆಯಾದ್ಯಂತ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 16 ಸಖಿ ಮತಗಟ್ಟೆಗಳನ್ನು ಸ್ಥಾಪಿಸಿ, ಮಹಿಳಾ ಸಿಬ್ಬಂದಿಗಳನ್ನೇ ನೇಮಿಸಲಾಗಿತ್ತು. ಅಲ್ಲದೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ವಿಕಲಚೇತನರಿಗೆ, ಬಾಣಂತಿಯರು ಹಾಗೂ ವಯೋವೃದ್ದರು ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗಲೆಂದು ಇದೇ ಪ್ರಥಮ ಬಾರಿಗೆ ಉಚಿತ ಆಟೋ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅನಾರೋಗ್ಯ ಮತ್ತಿತರ ತೊಂದರೆಯಾದಲ್ಲಿ ಆಸ್ಪತ್ರೆಗೆ ಸಾಗಿಸಲು, ಚಿಕಿತ್ಸೆ ನೀಡುವ ಕಾರ್ಯಕ್ಕಾಗಿ ಮತಗಟ್ಟೆಗೆ ತಲಾ ಇಬ್ಬರು ಆಶಾ ಕಾರ್ಯಕರ್ತೆಯರು, ಕಿರಿಯ ವೈದ್ಯರನ್ನು ನೇಮಿಸಲಾಗಿತ್ತು.

ಮತಗಟ್ಟೆಗಳಲ್ಲಿಲ್ಲ ಮೂಲಸೌಕರ್ಯ!
ಜಿಲ್ಲೆಯ ಅನೇಕ ಮತಗಟ್ಟೆಗಳಲ್ಲಿ ಮತದಾನಕ್ಕೆ ಬರುವವರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯಾಗಲೀ, ನೆರಳಿನ ವ್ಯವಸ್ಥೆಯಾಗಲೀ ಕಲ್ಪಿಸಿರಲಿಲ್ಲ. ಇದರಿಂದ ಬಿರುಬಿಸಿಲಿನಲ್ಲಿ ಮತದಾನಕ್ಕೆ ಬಂದ ಮತದಾರರೂ ಗೊಣಗುತ್ತಲೇ ಮತದಾನ ನಡೆಸಿದ್ದು ಕಂಡುಬಂತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top