---

► ಕೈಕೊಟ್ಟ ಮತಯಂತ್ರ ► ಮತದಾರರ ಪಟ್ಟಿಯಿಂದ ಹಲವರ ಹೆಸರು ನಾಪತ್ತೆ

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಹೈವೋಲ್ಟೇಜ್ ಕಣದಲ್ಲಿ ಬಿರುಸಿನ ಮತದಾನ

ಶಿವಮೊಗ್ಗ, ಎ. 23: ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿರುವ, ‘ಹೈವೋಲ್ಟೇಜ್’ ಕಣವಾಗಿ ಬಿಂಬಿತವಾಗಿರುವ, ರಾಷ್ಟ್ರ-ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಅತ್ಯಂತ ಉತ್ಸಾಹದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು.ಒಟ್ಟು ಶೇ.76.40 ಮತದಾನ ನಡೆದಿದೆ.    

ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನದವರೆಗೂ ನೆತ್ತಿ ಸುಡುವ ಬಿಸಿಲು ಹಾಗೂ ಸಂಜೆಯ ನಂತರ ಮೋಡ-ಮಳೆ ವಾತಾವಣರದ ನಡುವೆಯೂ ನಗರ-ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಅತ್ಯಂತ ಉತ್ಸಾಹದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಕೆಲ ಮತಗಟ್ಟೆಗಳಲ್ಲಿ ಮತದಾರರ ಭಾರೀ ದೊಡ್ಡ ಪ್ರಮಾಣದ ಸರತಿ ಸಾಲು ಕಂಡುಬಂದಿತು. ಸೊರಬ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಮತದಾನವಾಗಿದೆ. ಶಿವಮೊಗ್ಗ ನಗರದ ಸುಮಾರು ಮೂರು ಮತಗಟ್ಟೆಗಳಲ್ಲಿ, ಮತಯಂತ್ರ ಕೈಕೊಟ್ಟವು. ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ನಾಪತ್ತೆಯಂತಹ ದೂರುಗಳು ಕೇಳಿ ಬಂದವು. ಸಂಜೆಯ ನಂತರ ಮಲೆನಾಡು ಭಾಗದ ಕೆಲ ಪ್ರದೇಶಗಳಲ್ಲಿ ಮಳೆಯಾಯಿತು. ಶಿವಮೊಗ್ಗದಲ್ಲಿಯೂ ಮೋಡ ಕವಿದ ವಾತಾವರಣ ಕಂಡುಬಂದಿತು.

ಗೊಂದಲ: ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯ ಸರಕಾರಿ ಉರ್ದು ಶಾಲೆಯ 31ನೇ ಸಂಖ್ಯೆ ಮತಗಟ್ಟೆಯಲ್ಲಿ ಇವಿಎಂ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇದರಿಂದ ಈ ಮತಗಟ್ಟೆಯಲ್ಲಿ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಹಾಗೂ ತಂತ್ರಜ್ಞರು ಸ್ಥಳಕ್ಕಾಗಮಿಸಿ, ಇವಿಎಂ ಯಂತ್ರ ಪರಿಶೀಲನೆ ನಡೆಸಿದ್ದಾರೆ. ತದನಂತರ ಮತದಾನ ಆರಂಭವಾಯಿತು ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಹಾಗೆಯೇ ಟಿಪ್ಪುನಗರ 7ನೇ ತಿರುವಿನ ಉರ್ದು ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 227 ರಲ್ಲಿ ಮತಯಂತ್ರ ಕೈಕೊಟ್ಟ ಘಟನೆ ನಡೆದಿದೆ. ಹಾಗೆಯೇ ಹೊಸಮನೆ ಬಡಾವಣೆಯ ವೀಣಾ ಶಾರದಾ ಶಿಕ್ಷಣ ಸಂಸ್ಥೆಯಲ್ಲಿಯೂ ಮತಯಂತ್ರ ದೋಷದಿಂದ ವಿಳಂಬವಾಗಿ ಮತದಾನ ಆರಂಭವಾದ ವರದಿಗಳು ಬಂದಿವೆ. ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ದೊಡ್ಡಮಟ್ಟಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಆರೋಪಿಸಿದ್ದರು. ನಂತರ ಅಧಿಕಾರಿಗಳ ಮನವೊಲಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಮಾಡಲು ಮುಂದಾದರು.  ಸುಗಮ-ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ವ್ಯಾಪಕ ಕ್ರಮಕೈಗೊಂಡಿತ್ತು. ಭದ್ರತೆಗಾಗಿ ಸಾವಿರಾರು ಅಧಿಕಾರಿ-ಸಿಬ್ಬಂದಿಯನ್ನು ನಿಯೋಜಿಸಿತ್ತು. ಗಸ್ತು ವ್ಯವಸ್ಥೆ ಬಿಗಿಗೊಳಿ ಸಲಾಗಿತ್ತು. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹದ್ದಿನ ಕಣ್ಗಾವಲಿಡಲಾಗಿತ್ತು.

ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2021 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಶಿವಮೊಗ್ಗ ಗ್ರಾಮಾಂತರದಲ್ಲಿ 247, ಭದ್ರಾವತಿಯಲ್ಲಿ 253, ಶಿವಮೊಗ್ಗದಲ್ಲಿ 282, ತೀರ್ಥಹಳ್ಳಿಯಲ್ಲಿ 258, ಶಿಕಾರಿಪುರದಲ್ಲಿ 232, ಸೊರಬದಲ್ಲಿ 239, ಸಾಗರದಲ್ಲಿ 264 ಹಾಗೂ ಬೈಂದೂರಿನಲ್ಲಿ 246 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮತದಾನ ಕಾರ್ಯಕ್ಕೆ ಪಿಆರ್‌ಒ, ಎಪಿಆರ್‌ಒ, ಪಿಒ ಸೇರಿದಂತೆ ಒಟ್ಟು 4042 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಹಕ್ಕಿಪಿಕ್ಕಿ ನಿವಾಸಿಗಳಿಂದ ಮತದಾನ ಬಹಿಷ್ಕಾರ

ಗರದ ಹೊರವಲಯ ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ಬಡಾವವಣೆಯ ಹಕ್ಕಿಪಿಕ್ಕಿ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದರು. ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ. ಈ ಕಾರಣದಿಂದ ಮತದಾನ ಕಾರ್ಯದಿಂದ ದೂರ ಉಳಿಯ ಲಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಸಖಿ ಮತಗಟ್ಟೆಗಳ ಮೂಲಕ ಮಹಿಳಾ ಮತದಾನಕ್ಕೆ ಪ್ರೋತ್ಸಾಹ

ಮಹಿಳೆಯರು ಮತದಾನದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬಾರಿ ಜಿಲ್ಲೆಯಲ್ಲಿ ಒಟ್ಟು 14 ಸಖಿ ಮತಗಟ್ಟೆ ತೆರೆಯಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2 ಸಖಿ ಮತಗಟ್ಟೆಗಳನ್ನು ತೆರೆಯಲಾಗಿತ್ತು . ಇದೇ ರೀತಿ ಬುಡಕಟ್ಟು ಜನರನ್ನು ಮತದಾನಕ್ಕೆ ಆಕರ್ಷಿಸಲು 3 ಬುಡಕಟ್ಟು ಮತದಾನ ಕೇಂದ್ರಗಳು ಹಾಗೂ 2 ಅಂಗವಿಕಲರ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು

ಹರಿಯಿತು ಹಣದ ಹೊಳೆ!?
ಮತದಾನದ ಮುನ್ನಾ ದಿನವಾದ ಸೋಮವಾರ ರಾತ್ರಿ ಕ್ಷೇತ್ರದ ಹಲವೆಡೆ ಕೆಲ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚಿಕೆ ಮಾಡಿರುವ ಆರೋಪಗಳು ಸಾರ್ವಜನಿಕರ ವಲಯದಿಂದ ಕೇಳಿಬಂದಿದೆ.

ಕೆಲವೆಡೆ ಮತದಾರರಿಗೆ ಕನಿಷ್ಠ 100, 200 ರೂ.ಗಳಿಂದ ಗರಿಷ್ಠ 500 ರೂ. ವರೆಗೆ ಹಂಚಿಕೆ ಮಾಡಲಾಗಿರುವ ಮಾಹಿತಿಗಳಿವೆ. ಚುನಾವಣಾ ಆಯೋಗದ ವ್ಯಾಪಕ ಕಟ್ಟೆಚ್ಚರದ ಹೊರತಾಗಿಯೂ, ಕ್ಷೇತ್ರದ ಹಲವೆಡೆ ಕೆಲ ರಾಜಕೀಯ ಪಕ್ಷಗಳು ಮತದಾರರಿಗೆ ನಿರಾಂತಕವಾಗಿಯೇ ಹಣದ ಆಮಿಷವೊಡ್ಡಿರುವುದು ಪ್ರಜ್ಞಾವಂತ ನಾಗರಿಕರ ಹುಬ್ಬೇರುವಂತೆ ಮಾಡಿದೆ.

ಪ್ರಮುಖ ನಾಯಕರಿಂದ ಮತದಾನ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ವಿಜಯೇಂದ್ರ ಮತ್ತವರ ಕುಟುಂಬ ಸದಸ್ಯರು ಶಿಕಾರಿಪುರ ಪಟ್ಟಣದ ತಾಲೂಕು ಪಂಚಾಯತ್‌ಕಚೇರಿ ಕಟ್ಟಡದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಸೊರಬ ತಾಲೂಕಿನ ಕುಬಟೂರು ಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪತಮ್ಮ ಹಕ್ಕು ಚಲಾಯಿಸಿದರು. ಶಿವಮೊಗ್ಗ ನಗರದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ, ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಆರ್. ಪ್ರಸನ್ನಕುಮಾರ್ ಮತ್ತು ತಾಲೂಕಿನ ಹಸೂಡಿ ಗ್ರಾಮದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್‌ ನಾಯ್ಕ ಮತ ಚಲಾಯಿಸಿದರು.

ಸೊರಬ ತಾಲೂಕಿನಲ್ಲಿ ಶಾಸಕ ಹಾಲಪ್ಪ, ಸಾಗರ ತಾಲೂಕಿನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ತೀರ್ಥಹಳ್ಳಿ ತಾಲೂಕಿನಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕ ಅಪ್ಪಾಜಿಗೌಡರವರು ಮತದಾನ ಮಾಡಿದ ಪ್ರಮುಖ ರಾಜಕಾರಣಿಗಳಾಗಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top