ಬಾಗೇಪಲ್ಲಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಶಿಕ್ಷಕನ ಬಂಧನ
ಬಾಗೇಪಲ್ಲಿ, ಜೂ.7: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನನ್ನು ಬಂಧಿಸಿರುವ ಘಟನೆ ಬಾಗೇಪಲ್ಲಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಆರ್.ಬಾಬು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಕೆರಳಿದ ಗ್ರಾಮಸ್ಥರು ಶಿಕ್ಷಕನನ್ನು ಗ್ರಾಮದ ಕಂಬಕ್ಕೆ ಕಟ್ಟಿ ಹಾಕಿ ಗೂಸಾ ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.
ಘಟನೆ ವಿವರ: ಅಪ್ರಾಪ್ತ ಬಾಲಕಿ ಹೋಬಳಿಯ ಪ್ರೌಢಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲಾ ಶಿಕ್ಷಕ ಆರ್.ಬಾಬು ವಿದ್ಯಾರ್ಥಿನಿಗೆ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ 20 ಕ್ಕೆ 20 ಅಂಕ ನೀಡುವ ನೆಪವೊಡ್ಡಿ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ, ಈ ವಿಷಯ ಅರಿತ ಪೋಷಕರು ಬಾಲಕಿಯನ್ನು ಶಾಲೆಯಿಂದ ಬಿಡಿಸಿದ್ದಾರೆ ಎನ್ನಲಾಗಿದೆ. ಆದರೂ ಶಿಕ್ಷಕ ತನ್ನ ಚಾಳಿಯನ್ನು ಬಿಡದೆ ಬಾಲಕಿಗೆ ಮೊಬೈಲ್ ಪೋನ್ ಕೊಡಿಸಿ, ನಿರಂತರವಾಗಿ ಮೊಬೈಲ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿಕ್ಷಕ ಬುಧವಾರ ಬಾಲಕಿಗೆ ಮೊಬೈಲ್ ಕರೆ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಬಾಲಕಿಯ ಪೋಷಕರು ಗುರುವಾರ ಪಾಠ ಮಾಡುತ್ತಿದ್ದ ವೇಳೆಯಲ್ಲಿ ಶಾಲೆಗೆ ಬಂದು ಶಿಕ್ಷಕನನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಗ್ರಾಮದಲ್ಲಿ ಪೋಷಕರು ಶಿಕ್ಷಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಆರ್.ಬಾಬು ಪೊಲೀಸರ ವಶದಲ್ಲಿದ್ದು, ಪೊಲೀಸರು ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.