ಅಶ್ಲೀಲ ಆಡಿಯೋ ನನ್ನದಲ್ಲ: ಎಚ್.ವಿಶ್ವನಾಥ್ ಸ್ಪಷ್ಟನೆ
ಬೆಂಗಳೂರು, ಜು.9: ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ ಆಡಿಯೋ ನನ್ನದಲ್ಲವೆಂದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ವಿಶ್ವನಾಥ್ ಮತ್ತು ಮಹಿಳೆಯೊಬ್ಬರ ನಡುವಿನ ಅಶ್ಲೀಲ ಮಾತುಗಳು ಎನ್ನಲಾದ ಆಡಿಯೊವೊಂದು ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಮುಂಬೈನಲ್ಲಿ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ ಅವರು, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರದ ಭಾಗವಾಗಿ ನಕಲಿ ಆಡಿಯೋವನ್ನು ಸೃಷ್ಟಿಸಲಾಗಿದೆ ಎಂದರು.
ನನ್ನ ಜೀವನ ಏನು ಎಂಬುದು ನನ್ನ ಕ್ಷೇತ್ರದ ಜನರಿಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ಬೆದರಿಸುವ ಉದ್ದೇಶದಿಂದ ಈ ರೀತಿಯಲ್ಲಿ ಕೀಳು ರಾಜಕೀಯ ಮಾಡಲಾಗಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹುಣಸೂರು ಕ್ಷೇತ್ರದ ನನ್ನ ವಿರೋಧಿಗಳು ನನ್ನ ಚಾರಿತ್ರಹರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ನನ್ನ ವೈಯಕ್ತಿಕ ಜೀವನ ಹಾಗೂ ನನ್ನ ಆರ್ಥಿಕ ಪರಿಸ್ಥಿತಿ ಎಲ್ಲ ವಿಚಾರಗಳನ್ನು ಹಳ್ಳಿ ಹಕ್ಕಿ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಸಚಿವ ಸ್ಥಾನ ಸೇರಿದಂತೆ ಯಾವುದೆ ಆಮಿಷಕ್ಕೆ ನಾನು ಒಪ್ಪದ ಕಾರಣ ಈ ಪ್ರಯೋಗವನ್ನು ಮಾಡಲಾಗಿದೆ. ಇಂತಹ ಕುತಂತ್ರಗಳು ಎದುರಾಳಿಗಳಿಗೆ ಫಲ ನೀಡುವುದಿಲ್ಲವೆಂದು ಅವರು ಹೇಳಿದರು.