ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಗೆ ಸಿದ್ಧತೆ: ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸಾಧ್ಯತೆ
ಬೆಂಗಳೂರು, ಜು.31: ಯಡಿಯೂರಪ್ಪ ನೇತೃತ್ವದ ನೂತನ ಸರಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಸಿದ್ಧತೆ ನಡೆಸಿದೆ. ಪ್ರಮುಖ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನಗರದ ಆಯಕಟ್ಟಿನ ಜಾಗದಲ್ಲಿರುವ 18 ಮಂದಿ ಡಿಸಿಪಿ ಹಾಗೂ ಐಜಿಪಿಗಳ ಪಟ್ಟಿ ತರಿಸಿಕೊಂಡಿದ್ದಾರೆ. ಸಚಿವ ಸಂಪುಟ ರಚನೆಯಾದ ಬಳಿಕ ಮಾಹಿತಿ ಆಧರಿಸಿ ಅಧಿಕಾರಿಗಳ ವರ್ಗಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಮೆತ್ರಿ ಸರಕಾರ ಕೆಲ ದಿನಗಳ ಹಿಂದೆಯಷ್ಟೆ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಸೇರಿ ಪ್ರಮುಖ ಸ್ಥಾನದಲ್ಲಿದ್ದ ಹಿರಿಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿತ್ತು. ಇದೀಗ ನೂತನ ಸರಕಾರವೂ, ಇತ್ತೀಚಿಗೆ ವರ್ಗಾವಣೆಯಾದ ಇನ್ಸ್ಪೆಕ್ಟರ್ ಮತ್ತು ಡಿವೈಎಸ್ಪಿಗಳ ಪಟ್ಟಿಯನ್ನು ತರಿಸಿಕೊಂಡಿದೆ. ಭ್ರಷ್ಟಾಚಾರ ನಿಗ್ರಹ ದಳ, ಅಪರಾಧ, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ, ಭದ್ರತಾ ವಿಭಾಗ ಹಾಗೂ ಪ್ರಮುಖ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಸ್ಥಾನ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.