ಪ್ರವಾಹ ಪರಿಸ್ಥಿತಿ: ಸಂತ್ರಸ್ತರಿಗೆ ಜೆಡಿಎಸ್ ಶಾಸಕರ ಒಂದು ತಿಂಗಳ ವೇತನ
ಬೆಂಗಳೂರು, ಆ. 9: ‘ಜ್ವರದಿಂದ ಬಳಲುತ್ತಿರುವ ಕಾರಣ ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ಟ್ವಿಟ್ಟರ್ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್ ಪಕ್ಷದ ಎಲ್ಲ ಶಾಸಕರು ನಮ್ಮ ಒಂದು ತಿಂಗಳ ಸಂಬಳವನ್ನು ನೀಡುತ್ತಿದ್ದೇವೆ. ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ’ ಎಂದು ಮತ್ತೊಂದು ಟ್ವೀಟ್ನಲ್ಲಿ ಕೋರಿದ್ದಾರೆ
‘ಕುಮಾರಸ್ವಾಮಿ ಅವರು ಬೆಳಗಾವಿ, ರಾಯಚೂರು, ಹಾಸನ, ಕೊಡಗು ಹಾಗೂ ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಕಷ್ಟದ ಪರಿಸ್ಥಿತಿ ನಿಭಾಯಿಸಲು ಹಗಲಿರುಳು ಶ್ರಮ ಪಡುತ್ತಿರುವ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳನ್ನು ಅಭಿನಂದಿಸಿದರು ಎಂದು ಜೆಡಿಎಸ್ ಪಕ್ಷ ಟ್ವೀಟ್ ಮಾಡಿದೆ.