ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ರೋಹಿಣಿ ಸಿಂಧೂರಿ
ಧಾರವಾಡ, ಸೆ.4: ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಖಾಸಗಿ ಕಂಪೆನಿಗಳು, ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೈಗೊಳ್ಳಲಾಗಿದೆ. ಕಾರ್ಮಿಕರ ಆಸಕ್ತಿ, ಬೇಡಿಕೆಗೆ ಅನುಸಾರವಾಗಿ ರಾಜ್ಯಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಬುಧವಾರ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಹಿಟಾಚಿ ತರಬೇತಿ ಕೇಂದ್ರದಲ್ಲಿ ಕಳೆದ 15 ದಿನಗಳ ಕಾಲ ನಡೆದ ಹತ್ತು ಜನ ಕಾರ್ಮಿಕರಿಗೆ ಎಕ್ಸ್ಕವೇಷನ್ ಮತ್ತು ಜೆಸಿಬಿ ಆಪರೇಟಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 20 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 55201 ನೋಂದಾಯಿತ ಕಾರ್ಮಿಕರಿದ್ದಾರೆ. ಮಂಡಳಿಯಲ್ಲಿ ಸುಮಾರು ಹದಿನೈದು ಕಾರ್ಮಿಕ ಕಲ್ಯಾಣ ಯೋಜನೆಗಳಿವೆ. ಆದರೆ, ಬಹುತೇಕರು ಮಕ್ಕಳ ಮದುವೆ ಮತ್ತು ವಿದ್ಯಾಭ್ಯಾಸಕ್ಕೆ ಮಾತ್ರ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ ಸೌಲಭ್ಯಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ವಲಸೆ ಬರುವ ಮತ್ತು ಹೋಗುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರನ್ನು ಹುಡುಕಿ ಸೌಲಭ್ಯಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣಕಾರರು, ಸಂಸ್ಥೆಗಳು ತಮ್ಮಲ್ಲಿರುವ ಕಾರ್ಮಿಕರ ನೋಂದಣಿಗೆ ಆದ್ಯತೆ ನೀಡಿದರೆ ಮಾತ್ರ ಈ ಕಾರ್ಯ ಸುಲಭವಾಗಲಿದೆ ಎಂದು ರೋಹಿಣಿ ಸಿಂಧೂರಿ ಹೇಳಿದರು.
ಉಪ ಕಾರ್ಮಿಕ ಆಯುಕ್ತ ವೆಂಕಟೇಶ್, ಸಹಾಯಕ ಕಾರ್ಮಿಕ ಆಯುಕ್ತ ಮೀನಾ ಪಾಟೀಲ್, ಅನುರಾಧಾ, ಗೋವಿಂದರಾಜ ಕುಲಕರ್ಣಿ, ರಾಮ ಮೋಹನ್ ಅಯ್ಯರ್ ಮತ್ತಿತರರು ಇದ್ದರು.