ಟಿಕ್ಟಾಕ್ ನಲ್ಲಿ ಅಶ್ಲೀಲ ವಾಯ್ಸ್ ಮಾಡಿ ಮಹಿಳೆಯ ವೀಡಿಯೋ ಪೋಸ್ಟ್: ಆರೋಪಿ ಬಂಧನ
ಶಿವಮೊಗ್ಗ, ಅ. 12: ಟಿಕ್ ಟಾಕ್ ನಲ್ಲಿ ನಕಲಿ ಖಾತೆ ತೆರೆದು, ಮಹಿಳೆಯೋರ್ವರ ಬಗ್ಗೆ ವೀಡಿಯೋ ಮಾಡಿ ಅಶ್ಲೀಲ ರೀತಿಯಲ್ಲಿ ಧ್ವನಿ ಮುದ್ರಿಕೆ (ವಾಯ್ಸ್ ಎಡಿಟ್) ಅಳವಡಿಸಿ ಅಪ್ಲೋಡ್ ಮಾಡಿದ್ದ ಆರೋಪದ ಮೇರೆಗೆ ಯುವಕನೋರ್ವನನ್ನು ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ನಿವಾಸಿ, ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಕುಮಾರ್ (23) ಬಂಧಿತ ಯುವಕ ಎಂದು ಗುರುತಿಸಲಾಗಿದೆ.
ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿಯು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಾರ್ಯುನಿರ್ವಹಿಸುವ ಮಹಿಳೆಯೋರ್ವರ ಪೋಟೋವನ್ನು ವೀಡಿಯೋ ಮಾಡಿ, ಅಶ್ಲೀಲವಾಗಿ ವಾಯ್ಸ್ ಎಡಿಟ್ ಮಾಡಿದ್ದ. ಇದನ್ನು ಟಿಕ್ಟಾಕ್ನಲ್ಲಿ ತೆರೆದಿದ್ದ ನಕಲಿ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮಹಿಳೆಯು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ಟಿಕ್ಟಾಕ್ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು, ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.