ತಾಯಿ, ಮಗಳು ನೇಣು ಬಿಗಿದು ಆತ್ಮಹತ್ಯೆ
ಮೈಸೂರು,ನ.4: ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿ ಮತ್ತು ಆಕೆಯ ಹನ್ನೊಂದು ವರ್ಷದ ಮಗಳು ಒಂದೇ ಕುಣಿಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ತಾಯಿ ಜಯಾ(35) ಮಗಳು ಪ್ರಿಯಾ(11) ಎಂದು ಗುರುತಿಸಲಾಗಿದೆ. ಪ್ರಿಯಾ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಲಿಫ್ಟ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರಿನ ಸುಧಾಕರ್ ಅವರು ಶಿವಮೊಗ್ಗದ ಜಯಾ ಅವರನ್ನು 12ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೆಟ್ಟು ಹೋಗಿದ್ದ ಲಿಫ್ಟ್ ಅನ್ನು ಸುಧಾಕರ್ ದುರಸ್ತಿ ಮಾಡಲು ತೆರಳಿದ್ದರು. ರಾತ್ರಿ ಅವರು ಮನೆಗೆ ವಾಪಸ್ ಬಂದಾಗ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ವಿಜಯ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಎನ್.ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಕಲಹದಂತೆ ಕಂಡು ಬಂದಿದೆ.
ಈ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.