ಬಿಜೆಪಿ ಅಧಿಕಾರದಲ್ಲಿರುವವರೆಗೂ ತಳ ಸಮುದಾಯಗಳ ಏಳಿಗೆ ಅಸಾಧ್ಯ: ಸಿದ್ದರಾಮಯ್ಯ | Vartha Bharati- ವಾರ್ತಾ ಭಾರತಿ

---

ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮ ದಿನಾಚರಣೆ

ಬಿಜೆಪಿ ಅಧಿಕಾರದಲ್ಲಿರುವವರೆಗೂ ತಳ ಸಮುದಾಯಗಳ ಏಳಿಗೆ ಅಸಾಧ್ಯ: ಸಿದ್ದರಾಮಯ್ಯ

ಚಿಕ್ಕಮಗಳೂರು, ನ.19: ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರು, ಕಾರ್ಮಿಕರು, ಸಂಕಷ್ಟಕ್ಕೆ ಸಿಲುಕಿದ್ದರೂ ಚುನಾವಣಾ ಪ್ರಚಾರಗಳಲ್ಲಿ 370ನೇ ವಿಧಿ ರದ್ದು ಮಾಡಿರುವುದು, ಪುಲ್ವಾಮ, ಬಾಲಾಕೋಟ್‍ನಂತಹ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೂ ತಳ ಸಮುದಾಯದ ಜನತೆ ಹಾಗೂ ದೇಶದ ಯುವಜನರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ ಮತ್ತು ಕಾಂಗ್ರೆಸ್‍ನ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದಲ್ಲಿ ಬಡತನ ತೊಲಗದೇ ದೇಶ ಉದ್ದಾರ ಸಾಧ್ಯವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಯುವಜನರಿಗೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು ಅದು ಹುಸಿಯಾಗಿದ್ದು, ಅವರು ಜಾರಿಗೆ ತಂದ ಜಿಎಸ್‍ಟಿ ಹಾಗೂ ನೋಟು ಅಮಾನ್ಯೀಕರಣ ನೀತಿಯ ಪರಿಣಾಮ ದೇಶದ ಅಧೋಗತಿಗಿಳಿದೆ ಎಂದು ಹರಿಹಾಯ್ದರು.

ಬಿಜೆಪಿಯವರು ಎಂದೂ ಸತ್ಯವನ್ನು ಕೇಳುವುದಿಲ್ಲ, ಸತ್ಯವನ್ನು ಹೇಳುವುದಿಲ್ಲ, ಸತ್ಯವನ್ನು ಸುಳ್ಳು ಮಾಡುವುದು, ಸುಳ್ಳನ್ನು ಸತ್ಯ ಮಾಡುವುದರ ಮೂಲಕ ಫ್ಯಾಸಿಸಂನ ವಿಷಬೀಜ ಬಿತ್ತುತ್ತಿದ್ದಾರೆ ಎಂದ ಸಿದ್ದರಾಮಯ್ಯ, ಅಂದು ಹಿಟ್ಲರ್ ಸರ್ವಾಧಿಕಾರಿ ಧೋರಣೆಯನ್ನು ತಳೆದಿದ್ದ. ಇಂದು ಬಿಜೆಪಿಯವರು ತಳೆದಿದ್ದಾರೆ ಎಂದು ಚಾಟಿ ಬೀಸಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ತೀವ್ರ ಬರಪರಿಸ್ಥಿತಿ ಇದ್ದ ಪರಿಣಾಮ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿಕೊಂಡಿದ್ದೆ, ಆದರೆ ಜೊತೆಗೆ ಬಂದಿದ್ದ ನಾಯಕರ್ಯಾರು ತುಟಿ ಬಿಚ್ಚುವ ಧೈರ್ಯವನ್ನೇ ಮಾಡಲಿಲ್ಲ ಎಂದು ಕುಹಕವಾಡಿದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ್ದು, ಸ್ವಾತಂತ್ರ್ಯ ನಂತರ ಅವರು ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಮಹಾನ್ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಅದಕ್ಕೆ ಮೊದಲೇ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಇಂದಿರಾಗಾಂಧಿ ಬೇರ್ಪಡಿಸಿದ್ದರು, ಇದಕ್ಕಿಂತ ದೊಡ್ಡ ಕೆಲಸವಿದೆಯಾ ಎಂದು ಪ್ರಶ್ನಿಸಿದ ಅವರು, ಅಂದೇ ವಾಜಪೇಯಿಯವರು ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಬಣ್ಣಿಸಿದ್ದರು. ಇತಿಹಾಸ ತಿರುಚುವುದೇ ಬಿಜೆಪಿಗರ ಕೆಲಸ, ಇತ್ತೀಚೆಗೆ ಟಿಪ್ಪು ಸುಲ್ತಾನ್‍ನ ಇತಿಹಾಸವನ್ನು ಪಠ್ಯದಿಂದ ತೆಗೆದುಹಾಕುವ ಹೇಳಿಕೆ ನೀಡಿದ್ದಾರೆ, ಟಿಪ್ಪು ಮತ್ತು ಹೈದರಾಲಿಯನ್ನು ಹೊರತುಪಡಿಸಿದರೆ ಮೈಸೂರಿನ ಇತಿಹಾಸವೇ ಅಪೂರ್ಣ ಎಂದು ಹೇಳಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಇಂದಿರಾ ಗಾಂಧಿಗಿಂತ ಜನಪ್ರಿಯತೆಯನ್ನು ಪಡೆದ ಮತ್ತೊಬ್ಬ ಮುಖಂಡರು ಪ್ರಪಂಚದಲ್ಲಿಯೇ ಇಲ್ಲ. ಅವರು ಜನಪರ ಕೆಲಸಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು ಎಂದು ಹೇಳಿದರು.  ಕಾಂಗ್ರೆಸ್ ಜನಪರ ಕೆಲಸ ಹಾಗೂ ಜನರಿಗಾಗಿ ಹಲವು ಯೋಜನೆಗಳು, ರೈತರು, ಬಡವರು, ಮಹಿಳೆರಿಗಾಗಿ, ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಚುನಾವಣಾ ಸಂದರ್ಭದಲ್ಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯದಿರುವುದು ವಿಷಾದನೀಯ ಎಂದರು.

ಬಿಜೆಪಿಯವರು ಯೋಜನೆಗಳನ್ನು ನೀಡುವ ಬದಲು ಭಾವನಾತ್ಮಕ ವಿಚಾರಗಳ ಮೂಲಕ ಮತದಾರರನ್ನು ಸೆಳೆಯುತ್ತಿದೆ ಎಂದ ಅವರು, ಕಾಂಗ್ರೆಸ್‍ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ, ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ವಿಚಾರಗಳಿಗಾಗಿ ಪಕ್ಷವನ್ನು ಒಡೆಯದೇ ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಹೋರಾಡಬೇಕೆಂದ ಅವರು, ಶೋಭಾ ಕರಂದ್ಲಾಜೆ ಸಂಸದೆಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಯಡಿಯೂರಪ್ಪನವರ ಕುರ್ಚಿ ಭದ್ರಪಡಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜನಪರ ಕಾಳಜಿಯಿಲ್ಲ/ ಬಿಜೆಪಿಯ ದ್ವೇಷ, ಸುಳ್ಳು ರಾಜಕಾರಣದ ವಿರುದ್ದ ಹೋರಾಡುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ ಎಂದು ಹೇಳಿದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ, ಅಧಿಕಾರದ ವ್ಯಾಮೋಹವಿಲ್ಲದೇ ತ್ಯಾಗ, ಬಲಿದಾನಗಳ ಇತಿಹಾಸವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದ ಅವರು, ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಇಂದಿರಾಗಾಂಧಿ ಮತ್ತು ರಾಜೀವ್‍ ಗಾಂಧಿ ಬಲಿದಾನವಾಗಿದೆ. ಕಷ್ಟದ ದಿನಗಳಲ್ಲಿಯೂ ನನ್ನ ನೋವಿಗೆ ಸ್ಪಂದಿಸಿದ ರಾಜ್ಯದ ಜನತೆಗೆ ಚಿರ ಋಣಿ ಎಂದು ಹೇಳಿದ ಅವರು ವಾಮಮಾರ್ಗದಿಂದ ಬಿಜೆಪಿ ಅಧಿಕಾರ ಹಿಡಿದಿರಬಹುದು, ಜನರ ಸ್ಪೂರ್ತಿ ಮತ್ತು ಹುರುಪಿನಿಂದ ಕಾಂಗ್ರೆಸ್ ಧ್ವಜ ರಾಜ್ಯದಲ್ಲಿ ಮತ್ತೆ ಹಾರಾಡಲಿದೆ ಎಂದರು.

ವಿಧಾನಪರಿಷತ್‍ನ ವಿರೋಧಪಕ್ಷದ  ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಇಂದಿರಾಜಿಯವರ ತತ್ವ ಆದರ್ಶಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕೆಂದರು.

ಜಿಲ್ಲಾಧ್ಯಕ್ಷ ಅಧಿಕಾರ ವಹಿಸಿ ಡಾ.ಕೆ.ಪಿ ಅಂಶುಮಂತ್ ಮಾತನಾಡಿ, ನನಗೆ ನೀಡಿರುವ ಜವಾಬ್ದಾರಿಯನ್ನು ಗೌರವಪೂರಕವಾಗಿ ಸ್ವೀಕರಿಸಿ ಮುಖಂಡರು ಮತ್ತು ಕಾರ್ಯಕರ್ತರ ನಂಬಿಕೆಗಳನ್ನು ಹುಸಿಯಾಗಿಸದೇ ಪಕ್ಷವನ್ನು ಸದೃಢಗೊಳಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಜಿಲ್ಲೆಯ ಜನರ ಸಂಕಷ್ಟಗಳನ್ನು ಆಡಳಿತ ಪಕ್ಷಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುವುದಾಗಿ ಎಂದು ಹೇಳಿದ ಅವರು ಕಾರ್ಯಕರ್ತರಿಗೆ ಶಕ್ತಿ ನೀಡಿ ಜಿಲ್ಲೆಯಲ್ಲಿ ಕಾಂಗ್ರೇಸ್‍ನ ವೈಭವದ ದಿನಗಳನ್ನು ಮರುಕಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ನಿಕಟಪೂರ್ವ ಅಧ್ಯಕ್ಷ ಡಾ.ವಿಜಯಕುಮಾರ್ ಮಾತನಾಡಿ, ನನಗೆ ದೊರೆತ ಅವಕಾಶವನ್ನು ಮನಪೂರ್ವಕವಾಗಿ ನಿರ್ವಹಿಸಿದ್ದೇನೆ, ಪಕ್ಷ ಸಂಘಟನೆಗಾಗಿ ಹಲವು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದ್ದೇನೆ ಎಂದ ಅವರು ಇಂದಿನ ದಿನಗಳಲ್ಲಿಯೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದೊಂದಿಗೆ ಕೈಜೋಡಿಸಲಿದ್ದೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಮುಖಂಡ ಬಿ.ಎಲ್.ಶಂಕರ್, ಬಡಜನರ ಬದುಕಿನ ಸಂಬಂಧಿ ವಿಚಾರಗಳು ಚರ್ಚೆಯಾಗದೇ ಭಾವನಾತ್ಮಕ ವಿಚಾರಗಳನ್ನು ಬಿಜೆಪಿಯವರು ಚರ್ಚಿಸುತ್ತಿದ್ದಾರೆ ಅದನ್ನು ಬದುಕು ಸಂಬಂಧಿ ರಾಜಕಾರಣವನ್ನಾಗಿ ಬದಲಿಸುವುದು ಇಂದಿನ ಅಗತ್ಯ ಎಂದ ಅವರು ಕಾಂಗ್ರೇಸ್‍ನ ಬಗ್ಗೆ ಬುದ್ದಿಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದು ಅದನ್ನು ಸುಳ್ಳಾಗಿಸುವ ಪ್ರಯತ್ನಕ್ಕೆ ಕಾರ್ಯಕರ್ತರು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಯು.ಟಿ.ಖಾದರ್, ವಿನಯ್‍ ಕುಮಾರ್ ಸೊರಕೆ, ಡಿ.ಕೆ.ತಾರಾದೇವಿ, ಮೋಟಮ್ಮ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಮುಖಂಡರಾದ ಎಂ.ಎಲ್.ಮೂರ್ತಿ, ಸಚ್ಚಿನ್‍ ಮಿಗಾ, ಬಿ.ಎಂ.ಸಂದೀಪ್ ಸೇರಿದಂತೆ ಹಲವರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಗಣ್ಯರಿಗೆ ನಗರದ ಹನುಮಂತಪ್ಪ ವೃತ್ತದಲ್ಲಿ ಕಾರ್ಯಕರ್ತರು ದೊಡ್ಡ ಹೂಮಾಲೆಗಳನ್ನು ಕ್ರೇನ್ ಮೂಲಕ ಅರ್ಪಿಸಿ ಭವ್ಯ ಸ್ವಾಗತ ನೀಡಲಾಯಿತು. ಹನುಮಂತಪ್ಪ ವೃತ್ತದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ಡ್ರಮ್ಸ್ ನೊಂದಿಗೆ ಪಟಾಕಿ ಸಿಡಿಸಿ ಸಂಭ್ರಮದ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಫ್ಲೆಕ್ಸ್ ಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಫೋಟೋಗಳನ್ನು ಹಾಕಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಏರ್ಪಟ್ಟು ಕೈಕೈ ಮಿಲಾಯಿಸುವ ಹಂತ ತಲುಪಿತು. ಮಧ್ಯಪ್ರವೇಶಿಸಿದ ಕಾಂಗ್ರೆಸ್ ಮುಖಂಡರು ಆಕ್ರೋಶಭರಿತರಾಗಿದ್ದ ಯುವಕರನ್ನು ಸಮಾಧಾನಪಡಿಸಿದರು.

'ಸಂವಿಧಾನವನ್ನು ಅನಂತ್‍ ಕುಮಾರ್ ಹೆಗ್ಡೆ ಬರೆದರಾ?'
ಶಾಸಕ ಸಿ.ಟಿ.ರವಿ ಬಾಯಿಗೆ ಬೀಗವೇ ಇಲ್ಲ. ಆತನಿಗೆ ಸುಳ್ಳೇ ಬಂಡವಾಳ. ಜಿಲ್ಲೆಯಲ್ಲಿ ದತ್ತಪೀಠ, ದತ್ತಮಾಲೆ, ಶೋಭಾಯಾತ್ರೆಯನ್ನು ಬಿಟ್ಟರೇ ಬೇರೇನೂ ಅಭಿವೃದ್ದಿಯಾಗಿಲ್ಲ. ಎಂದು ಕುಟುಕಿದ ಅವರು, ದತ್ತಪೀಠ ವಿಚಾರವಿಲ್ಲದಿದ್ದರೆ ಸಿ.ಟಿ.ರವಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಸಭೆಯಲ್ಲು ಅಣಕವಾಡಿದ ಸಿದ್ದರಾಮಯ್ಯ, ಇತ್ತೀಚೆಗೆ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂದು ನಮೂದಿಸಲಾಗಿದೆ, ಹಾಗಾದರೆ ಸಂಸದ ಅನಂತ್ ಕುಮಾರ್ ಹೆಗ್ಡೆ ಬರೆದರಾ? ಎಂದು ಕುಟುಕಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top