ಬಾಲಕಿಯ ಅತ್ಯಾಚಾರ ಯತ್ನ ಆರೋಪ: ಯುವಕನ ಬಂಧನ
ಮಾಲೂರು, ಡಿ.9: ಬಾಲಕಿಗೆ ತಿಂಡಿ ನೀಡುವುದಾಗಿ ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಪಟ್ಟಣದ ಗಾಂಧಿ ವೃತ್ತದಲ್ಲಿ ರವಿವಾರ ಸಂಜೆ ನಡೆದಿದೆ.
ಪಟ್ಟಣದ ಗಾಂಧಿ ವೃತ್ತದಲ್ಲಿರುವ ರಾಜಸ್ಥಾನ ಮೂಲದ ಬಂಟಿ (20) ಎಂಬವನು ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಗ್ರಾನೈಟ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಂಟಿ ಬಾಲಕಿಯ ಹತ್ತಿರದ ಸಂಬಂಧಿಯಾಗಿದ್ದಾನೆ. ಈ ಹಿಂದೆಯೂ ಬಂಟಿ ಆಕೆಯನ್ನು ಹಲವಾರು ಬಾರಿ ತನ್ನ ಮನೆಗೆ ಕರೆದುಕೊಂಡು ಹೋಗಿ ತಿಂಡಿ ನೀಡುತ್ತಿದ್ದ. ಬಾಲಕಿಯನ್ನು ತಿಂಡಿ ನೀಡುವುದಾಗಿ ಪುಸಲಾಯಿಸಿ ತನ್ನ ಮನೆಯ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಈ ಸಂದಭರ್ದಲ್ಲಿ ಬಾಲಕಿಗೆ ತೀವ್ರ ಗಾಯವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪೋಷಕರು ತಿಳಿಸಿದ್ದಾರೆ.
ಈ ಸಂಬಂಧ ಮಾಲೂರು ಠಾಣೆಯಲ್ಲಿ ದೂರನ್ನು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಬಂಟಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.