ಅಮಿತ್ ಶಾ ಹುಬ್ಬಳ್ಳಿ ಭೇಟಿ ವಿರೋಧಿಸಿ ಪ್ರತಿಭಟನೆ: ‘ಗೋ ಬ್ಯಾಕ್’ ಘೋಷಣೆ
ಹಲವರು ಪೊಲೀಸ್ ವಶಕ್ಕೆ
ಹುಬ್ಬಳ್ಳಿ, ಜ. 18: ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕೇಂದ್ರ ಗೃಹ ಸಚಿವರ ವಿರುದ್ಧ ‘ಗೋ ಬ್ಯಾಕ್ ಅಮಿತ್ ಶಾ’ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಸಂವಿಧಾನ ರಕ್ಷಣಾ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ನಗರದ ಕೋರ್ಟ್ ವೃತ್ತದ ಬಳಿ ಸೇರಿದ್ದ ನೂರಾರು ಕಾರ್ಯಕರ್ತರನ್ನು ತಡೆಗಟ್ಟಿದ ಪೊಲೀಸರು ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು. ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಕೇಂದ್ರ ಸರಕಾರ ಮತ್ತು ಅಮಿತ್ ಶಾ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಬಲೂನ್ ಹಾರಾಟ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಏರ್ಪಡಿಸಿರುವ ಸಮಾವೇಶದ ಬಳಿಯೇ ಕಪ್ಪು ಬಣ್ಣದ ಬಲೂನ್ಗಳನ್ನು ಹಾರಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ‘ಗೋ ಬ್ಯಾಕ್ ಅಮಿತ್ ಶಾ’ ಎಂದು ಘೋಷಣೆ ಕೂಗಿದ ಸಂವಿಧಾನ ರಕ್ಷಣಾ ಸಮಿತಿ ಕಾರ್ಯಕರ್ತರು, ಕಪ್ಪು ಬಟ್ಟೆ ಧರಿಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಪ್ಪು ಬಟ್ಟೆ ತೊಟ್ಟಿದ್ದ ಪ್ರತಿಭಟನಾಕಾರರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ದಾದ, ಮಾತಿನ ಚಕಮಕಿಯೂ ನಡೆಯುತು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಎಸ್ಡಿಪಿಐ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಸಿಎಎ, ಎನ್ಆರ್ಸಿ ಪರ ಪ್ರಚಾರ ಇಂದು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಭಾಗವಹಿಸುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ದ 15ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಸಬಾ ಠಾಣಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.