ಪೊಲೀಸರಿಗೆ ಬೆದರಿಕೆ ಹಾಕಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿ!
ಶಿವಮೊಗ್ಗ, ಮಾ.20: ಡಾನ್ ಆಗುವ ಖಯಾಲಿಯಲ್ಲಿ ಮಾರಕಾಸ್ತ್ರ ತೋರಿಸಿ ಸಿನಿಮಾ ಹಾಡಿಗೆ ಹೋಲುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಸೂಳೆಬೈಲು ನಿವಾಸಿ ಶಾರು ಅಲಿಯಾಸ್ ಶೇಖ್ ಅಹ್ಮದ್(25), ಮುಹಮದ್ ನೂರುಲ್ಲಾ ಅಲಿಯಾಸ್ ಕೋಳಿ(20), ರಾಗಿಗುಡ್ಡ ನಿವಾಸಿ ಇಮ್ರಾನ್ ಖಾನ್ ಅಲಿಯಾಸ್ ಇಮ್ರಾನ್(32) ಎಂಬುವವರನ್ನು ರೌಡಿ ನಿಗ್ರಹದಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ ಎರಡು ಲಾಂಗ್, ಪಿಸ್ತೂಲ್ನಂತೆ ಕಾಣುವ ಒಂದ ಏರ್ಗನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರಕಾಸ್ತ್ರ ತೋರಿಸಿ ಸಿನಿಮಾ ಹಾಡುಗಳಿಗೆ ವಿಡಿಯೋ ಎಡಿಟ್ ಮಾಡಿ ಪೊಲೀಸರಿಗೆ ಬೈದು ಬೆದರಿಕೆ ಹಾಕುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಂಧಿತ ಶಾರು ವಿರುದ್ದ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ಗಾಂಜಾ, ಹಲ್ಲೆ ಸೇರಿದಂತೆ 16 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೆ ತಡ ಇವರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆ ಪಿ.ಐ ಕೆ.ಟಿ.ಗುರುರಾಜ್ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಸಿಬ್ಬಂದಿ ಮತ್ತು ಮಹಿಳಾ ಠಾಣೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.