ಕೊರೋನ ಸಂಬಂಧ ಸೇವೆಗೆ ಓಲಾ ವಾಹನ ಬಳಸಿಕೊಳ್ಳಿ: ಡಿಸಿಎಂಗೆ ಮಾಹಿತಿ ನೀಡಿದ ಓಲಾ ಸಂಸ್ಥೆ
ಬೆಂಗಳೂರು, ಮಾ.3: ಕೊರೋನ ಸಂಬಂಧಿತ ಸೇವೆಗೆ ಸಂಸ್ಥೆಯ 500 ವಾಹನಗಳನ್ನು ನೀಡುವುದಾಗಿ ಓಲಾ ಸಂಸ್ಥೆಯವರು, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರಿಗೆ ಮಾಹಿತಿ ನೀಡಿದ್ದಾರೆ.
ಓಲಾ ಸಂಸ್ಥೆಯ ಸಂಸ್ಥಾಪಕ ಭವಿಶ್ ರವಾಲ್ ಅವರು, ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಕರೆ ಮಾಡಿ ನಮ್ಮ ಸಂಸ್ಥೆಯ 500 ಕ್ಯಾಬ್ಗಳನ್ನು ಸರಕಾರ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದೆಂದು ತಿಳಿಸಿದ್ದಾರೆ.
ಸದ್ಯ ಓಲಾ ಕ್ಯಾಬ್ಗಳು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವ ಜಿಲ್ಲೆಗಳಿಗೆ ಎಷ್ಟು ಕ್ಯಾಬ್ಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ಸರಕಾರ ನಿರ್ಧರಿಸಬೇಕು.
ಓಲಾ ಕ್ಯಾಬ್ ಸೇವೆ ಬಳಸಿಕೊಳ್ಳುವ ಕುರಿತಂತೆ ಆಯಾ ಜಿಲ್ಲೆಯ ಅಧಿಕಾರಿಗಳ ಜತೆ ಮಾತಕುತೆ ನಡೆಸಿರುವ ಡಾ.ಅಶ್ವತ್ಥ ನಾರಾಯಣ ಅವರು, ಕೊರೋನ ಸಂಬಂಧಿತ ಸೇವೆಗಳಿಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಓಲಾ ಕ್ಯಾಬ್ ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ವೈದ್ಯ ಸಿಬ್ಬಂದಿ ಸೇರಿ ಅಗತ್ಯ ಸೇವೆ ಸಲ್ಲಿಸುತ್ತಿರುವ ಓಡಾಟಕ್ಕೆ ಈ ಕ್ಯಾಬ್ ಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಔಷಧ, ಇನ್ನಿತರ ಅಗತ್ಯ ವಸ್ತುಗಳ ಪೂರೈಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಕ್ಯಾಬ್ ಗಳನ್ನು ಬಳಸಿಕೊಳ್ಳಬಹುದು.