ಕೊರೋನದಿಂದ ಮೃತರಾದ ಕಲಬುರಗಿ ವಯೋವೃದ್ಧರ ಪುತ್ರಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ: ಜಿಲ್ಲಾಧಿಕಾರಿ
ಕಲಬುರಗಿ : ಕೊರೋನ ಸೋಂಕಿನಿಂದ ಮೃತರಾದ ಕಲಬುರಗಿಯ 76 ವರ್ಷದ ವಯೋವೃದ್ಧರ ಪುತ್ರಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಮೃತನ ನೇರ ಸಂಪರ್ಕದಲ್ಲಿ ಬಂದಿದ್ದ ಅವರ 45 ವರ್ಷದ ಪುತ್ರಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಕೊರೋನ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್ ನಲ್ಲಿಟ್ಟು ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ 14 ದಿನಗಳ ನಂತರ ಸದರಿ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ ನಂತರ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.
Next Story