ರಾಜ್ಯದಲ್ಲಿ ಇಂದು 36 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ
ಇದುವರೆಗೆ 36 ಸಾವು, 496 ಮಂದಿ ಗುಣಮುಖ
ಬೆಂಗಳೂರು, ಮೇ.16: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಅವಧಿಯಲ್ಲಿ ಒಟ್ಟು 36 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ.
ಈ ಪೈಕಿ ಬೆಂಗಳೂರು ನಗರದಲ್ಲಿ 14 ಮಂದಿ, ಕಲಬುರಗಿ 8, ಹಾಸನದ 4, ಶಿವಮೊಗ್ಗ 3, ಮಂಡ್ಯ, ಉಡುಪಿ, ವಿಜಯಪುರ, ಧಾರವಾಡ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆಯ ಓರ್ವರಲ್ಲಿ ಕೊರೋನ ಸೋಂಕು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.
ಒಟ್ಟಾರೆ ರಾಜ್ಯದಲ್ಲಿ ಸೋಂಕು ದೃಢಪಟ್ಟ 1092 ಮಂದಿಯ ಪೈಕಿ 496 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಒಟ್ಟು 36 ಮಂದಿ ಸಾವನ್ನಪ್ಪಿದ್ದಾರೆ. 559 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.