ರಾಜ್ಯದಲ್ಲಿ ಕೊರೋನ ಅಟ್ಟಹಾಸ: ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ಪಾಸಿಟಿವ್
ಉಡುಪಿ ಜಿಲ್ಲೆಯಲ್ಲಿ 204 ಮಂದಿಗೆ ಸೋಂಕು ದೃಢ
ಬೆಂಗಳೂರು, ಜೂ.3: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ 515 ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ. ಇದು ರಾಜ್ಯದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ಕೊರೋನ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 4,835ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 5 ಗಂಟೆವರೆಗೆ 515 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಉಡುಪಿ 204, ಯಾದಗಿರಿ 74, ವಿಜಯಪುರ 53, ಕಲಬುರಗಿ 42, ಬೀದರ್ 39, ಬೆಳಗಾವಿ 36, ಮಂಡ್ಯ 13, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಹಾಸನ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆಯಲ್ಲಿ ತಲಾ 3, ರಾಮನಗರ ಮತ್ತು ಹಾವೇರಿಯಲ್ಲಿ ತಲಾ 2, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 4,835 ಕೊರೋನ ಸೋಂಕಿತರ ಪೈಕಿ 1,688 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 83 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 57 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,088 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.