ರಾಜ್ಯದಲ್ಲಿ ಇಂದು 1,498 ಮಂದಿಗೆ ಕೊರೋನ ಸೋಂಕು ದೃಢ: 15 ಮಂದಿ ಸಾವು
ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆ
ಬೆಂಗಳೂರು, ಜು.7: ಕರ್ನಾಟಕದಲ್ಲಿ ಕೊರೋನ ವೈರಸ್ ನಾಗಾಲೋಟ ಮುಂದುವರಿದಿದ್ದು, ಇಂದು ಒಂದೇ ದಿನ 15 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ, 1,498 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ರಾಜ್ಯದಲ್ಲಿ ದೃಢಪಟ್ಟ 1,498 ಪ್ರಕರಣಗಳ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ. 15 ಸಾವಿನೊಂದಿಗೆ ಮೃತರ ಸಂಖ್ಯೆ 416ಕ್ಕೆ ಹೆಚ್ಚಳವಾಗಿದೆ.
ಕೆಲ ದಿನಗಳಿಂದ ಪ್ರತಿ ದಿನವೂ ಅತೀ ಹೆಚ್ಚಿನ ಕೊರೋನ ಸಾವು ಪ್ರಕರಣ ದಾಖಲಾಗುತ್ತಿದ್ದ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ. ಆದರೆ ಬೀದರ್ ನಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಇಂದು ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 4, ಕಲಬುರಗಿ 2, ಹಾಸನ, ಬಾಗಲಕೋಟೆ, ಧಾರವಾಡ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 22, ಬೆಳಗಾವಿ 20, ತುಮಕೂರು 16, ಕೊಡಗು 14, ಯಾದಗಿರಿ 10, ದಾವಣಗೆರೆ, ಕೋಲಾರ, ಹಾವೇರಿ, ಚಾಮರಾಜನಗರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 6, ಕೊಪ್ಪಳ 5, ಗದಗ 4, ಚಿಕ್ಕಬಳ್ಳಾಪುರ 3 ಮತ್ತು ಚಿತ್ರದುರ್ಗದಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 26,815 ಕೊರೋನ ಸೋಂಕಿತರ ಪೈಕಿ 11,098 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 571 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 416 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 15,297 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.